ಆರೋಗ್ಯಕರ ಸಮಾಜ ಕಟ್ಟಲು ರಾಷ್ಟ್ರೀಯ ಸೇವಾ ಯೋಜನೆ ಪೂರಕ ವೇದಿಕೆ : ಹರೇಕಳ ಹಾಜಬ್ಬ
ಮಂಗಳೂರು, ಜೂ.೩೦: ಆರೋಗ್ಯಕರ ಸಮಾಜ ಕಟ್ಟಲು ಯುವ ಸಮೂಹಕ್ಕೆ ರಾಷ್ಟ್ರೀಯ ಸೇವಾ ಯೋಜನೆಯು ಪೂರಕ ವೇದಿಕೆಯಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ ಅಭಿಪ್ರಾಯಪಟ್ಟರು.
ಮಂಜನಾಡಿಯ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮದನುಲ್ ಉಲೂಂ ಮದ್ರಸದಲ್ಲಿ ನಡೆಯುತ್ತಿರುವ ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯ, ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಯೆನೆಪೋಯ ನರ್ಸಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹರೇಕಳ ಹಾಜಬ್ಬ ನುಡಿದರು.
ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಂ ವಿಜಯಕುಮಾರ್ ಮಾತನಾಡಿ, ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಪಾಲಿಸಿದರೆ ಭವಿಷ್ಯದ ದಿನಗಳಲ್ಲಿ ಉಪಯೋಗಕ್ಕೆ ಬರಲಿದೆ ಎಂದರು.
ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಲೀನಾ ಕೆ.ಸಿ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಮುಹಮ್ಮದ್ ಗುಲ್ಜಾರ್ ಅಹ್ಮದ್ ಸ್ವಾಗತಿಸಿದರು.
ಡಾ.ಹಬೀಬ್ ರಹ್ಮಾನ್, ಡಾ.ಅಶ್ವಿನಿ ಶೆಟ್ಟಿ, ಡಾ. ಇಮ್ರಾನ್, ಮಂಜನಾಡಿ ಗ್ರಾಪಂ ಅಧ್ಯಕ್ಷೆ ಕೌಸರ್ ಬಾನು, ಡಾ. ರಮ್ಯಾ, ಸುರೇಖಾ, ಅಬ್ದುಲ್ ಹಮೀದ್, ಮುನೀರ್ ಮತ್ತಿತರರು ಉಪಸ್ಥಿತರಿದ್ದರು. ಮುಹಮ್ಮದ್ ಆಸಿಫ್ ಶಿಬಿರವನ್ನು ಸಂಘಟಿಸಿದ್ದರು. ರೆನಿತಾ ಪ್ರಿಯಾ ವಂದಿಸಿದರು.