ಉಡುಪಿ ನೂತನ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅಧಿಕಾರ ಸ್ವೀಕಾರ
ಉಡುಪಿ, ಜು.14: ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ವಿದ್ಯಾಕುಮಾರಿ ಕೆ. ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಕೆಲವು ವರ್ಷಗಳ ಹಿಂದೆ ಅವರು ಇಲ್ಲೇ ಅಪರ ಜಿಲ್ಲಾಧಿಕಾರಿಯಾಗಿ ಸುಮಾರು ಎರಡು ವರ್ಷ ಸೇವೆ ಸಲ್ಲಿಸಿದ್ದರು.
ನಿರ್ಗಮನ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ನೂತನ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರನ್ನು ಸ್ವಾಗತಿಸಿ, ಅಧಿಕಾರವನ್ನು ಹಸ್ತಾಂತರಿಸಿ ಶುಭ ಕೋರಿದರು.
ವಿದ್ಯಾಕುಮಾರಿ ಅವರು 2006ರಲ್ಲಿ ಕೆಎಎಸ್ ತೇರ್ಗಡೆಗೊಂಡು ಸೇವೆಗೆ ಸೇರ್ಪಡೆಗೊಂಡಿದ್ದರು. 2021ರಲ್ಲಿ ಅವರಿಗೆ ಐಎಎಸ್ ಆಗಿ ಭಡ್ತಿ ದೊರಕಿತ್ತು. ಆ ಬಳಿಕ ಅವರು ತುಮಕೂರು ಜಿಲ್ಲಾ ಪಂಚಾಯತ್‌ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳು ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿತ್ತಾದರೂ ಹುದ್ದೆ ಹಾಗೂ ಸ್ಥಳವನ್ನು ತೋರಿಸಿರಲಿಲ್ಲ.
ಮಂಗಳೂರು ಸಮೀಪದ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ವರಾದ ವಿದ್ಯಾಕುಮಾರಿ ಮಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದು, ಮಂಗಳೂರು ವಿವಿಯಿಂದ ಕನ್ನಡ ಸ್ನಾತಕೋತ್ತರ ಎಂಎ ಪದವಿ ಪಡೆದಿದ್ದರು. 2020ರಲ್ಲಿ ಹಂಪಿ ವಿವಿಯಿಂದ ಡಾಕ್ಟರೇಟ್ ಪಡೆದಿದ್ದರು.
ಚಿತ್ರದುರ್ಗದಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿಯಾಗಿ, ಮೈಸೂರು ಕಾರ್ಪೋರೇಷನ್ ಕೌನ್ಸಿಲ್ ಕಾರ್ಯದರ್ಶಿ, ಹುಣಸೂರು ಉಪ ವಿಭಾಗಾಧಿ ಕಾರಿ, ಮೈಸೂರು ಮುಡಾ ಕಾರ್ಯದರ್ಶಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಉಪ ಕಾರ್ಯ ದರ್ಶಿ, ಕೆ.ಎಸ್.ಟಿ.ಡಿ.ಸಿ ಜನರಲ್ ಮ್ಯಾನೇಜರ್, ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತೆ, ಕೋಲಾರ ಹೆಚ್ಚುವರಿ ಜಿಲ್ಲಾಧಿಕಾರಿ, ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ವಿಭಾಗದ ಅಪರ ಪ್ರಾದೇಶಿಕ ಆಯುಕ್ತೆಯಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ.