ಚರಂಡಿಗೆ ಕಸ, ಕಡ್ಡಿ, ಪ್ಲಾಸ್ಟಿಕ್‌ಗಳನ್ನು ಎಸೆಯದಂತೆ ಸೂಚನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಬನ್ನಂಜೆ ವಾರ್ಡಿನ ಮಠದಬೆಟ್ಟು ಕಿಂಡಿ ಅಣಿಕಟ್ಟಿನಲ್ಲಿ ಜೂ. ೨೮ರಂದು ಭಾರಿ ಪ್ರಮಾಣದ ಕಸ, ಮರ ಹಾಗೂ ಮರದ ರೆಂಬೆ ಕೊಂಬೆಗಳು ಬಂದು ಕಿಂಡಿ ಅಣಿಕಟ್ಟಿನ ಹತ್ತಿರ ಬ್ಲಾಕ್ ಆಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಅದರಂತೆ ನಗರಸಭೆ ಅಧಿಕಾರಿ ಗಳು ಸ್ಥಳ ಪರಿಶೀಲಿಸಿ ಬ್ಲಾಕ್ ಆಗಿದ್ದ ಮರದ ರಾಶಿಗಳನ್ನು ಪೌರಕಾರ್ಮಿಕರಿಂದ ತೆರವುಗೊಳಿಸಲು ನೀರಿನ ರಭಸ ಹೆಚ್ಚಿದ್ದರಿಂದ ಅಸಾಧ್ಯವಾಗಿದೆ.
ಆದ್ದರಿಂದ ನಗರಸಭೆಯ ಜೆಸಿಬಿಯನ್ನು ಬಳಸಿ ಸಂಜೆಯ ವೇಳೆಗೆ ಸಿಕ್ಕಿ ಹಾಕಿಕೊಂಡಿದ್ದ ಮರದ ರೆಂಬೆ ಕೊಂಬೆಗಳ ರಾಶಿಯನ್ನು ತೆರವುಗೊಳಿಸಲಾಗಿದೆ. ಈ ತೆರವುಗೊಳಿಸುವ ಸಂದರ್ಭದಲ್ಲಿ ಸೇತುವೆಯ ರೇಲಿಂಗ್ಸ್‌ನ ಕೆಲವು ಭಾಗದಲ್ಲಿ ಹಾನಿಯಾಗಿದೆ.
ಸಾರ್ವಜನಿಕರು ಮಳೆ ನೀರು ಹರಿಯುವ ಚರಂಡಿಗಳಿಗೆ ಕಸ ಕಡ್ಡಿ, ಪ್ಲಾಸ್ಟಿಕ್, ಮರ ಗಿಡಗಳನ್ನು ಹಾಕಿದಾಗ ಈ ರೀತಿಯಲ್ಲಿ ಬಂದು ಬ್ಲಾಕ್ ಆಗಿ ಕೃತಕ ನೆರೆ ಉಂಟಾಗುವ ಸಂಭವವಿದ್ದು, ಇದರಿಂದ ಸಾರ್ವಜನಿಕರ ಆಸ್ತಿಗೆ ಹಾನಿಯಾಗುತ್ತದೆ. ಸಾರ್ವಜನಿಕರ ಹಣ ವ್ಯರ್ಥವಾಗಿ ಪೋಲಾಗುವುದ ರೊಂದಿಗೆ ಸಾರ್ವಜನಿಕರು ಆಯತಪ್ಪಿ ಬಿದ್ದಲ್ಲಿ ಜೀವಹಾನಿಯಾಗುವ ಸಂಭವವಿರುತ್ತದೆ.
ಆದ್ದರಿಂದ ಸಾರ್ವಜನಿಕರು ವಿಷಯವನ್ನು ಅರಿತು ನಗರಸಭೆಯೊಂದಿಗೆ ಸಹಕರಿಸುವಂತೆ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.