ಕರಾವಳಿಯಲ್ಲಿ ಮತ್ತೆ ಆರೆಂಜ್ ಅಲರ್ಟ್ : ಹವಾಮಾನ ಇಲಾಖೆ
ಉಡುಪಿ, ಜು.17: ರಾಜ್ಯದ ಕರಾವಳಿ ಮೂರು ಜಿಲ್ಲೆಗಳಲ್ಲಿ ಮಳೆ ಮತ್ತೆ ಬಿರುಸನ್ನು ಪಡೆಯುತಿದ್ದು, ಜು. 20ರವರೆಗೆ ಎಲ್ಲೋ ಅಲರ್ಟ್‌ನ್ನೂ 21 ಮತ್ತು 22ಕ್ಕೆ ಆರೆಂಜ್ ಅಲರ್ಟ್‌ನ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಈ ನಡುವೆ ಜು.21ರವರೆಗೆ ಕರಾವಳಿ ತೀರದುದ್ದಕ್ಕೂ ಗಂಟೆಗೆ 40ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಹೀಗಾಗಿ ಮೀನು ಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರ ಪ್ರಕ್ಷುಬ್ಧವಾಗಿರ ಲಿದ್ದು, ಜು.18ರಂದು ರಾತ್ರಿ 11:30ರವರೆಗೆ 2ರಿಂದ 2.8ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದೂ ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.
26.5ಮಿ.ಮೀ. ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಉಡುಪಿ ಜಿಲ್ಲೆಯಲ್ಲಿ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಸರಾಸರಿ 26.5 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 34.8, ಹೆಬ್ರಿಯಲ್ಲಿ 32.5, ಕಾರ್ಕಳದಲ್ಲಿ 32.3, ಬ್ರಹ್ಮಾವರದಲ್ಲಿ 31.6, ಕುಂದಾಪುರದಲ್ಲಿ 21.8, ಕಾಪುವಲ್ಲಿ 19.6 ಹಾಗೂ ಬೈಂದೂರಿನಲ್ಲಿ 15.8ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಬಜೆ ಡ್ಯಾಂನಲ್ಲಿ ಇಂದಿನ ನೀರಿನ ಮಟ್ಟ 5.75ಮೀ. ಆದರೆ, ಕಾರ್ಕಳದ ಮುಂಡ್ಲಿಯಲ್ಲಿ ನೀರಿನ ಮಟ್ಟ 5.48ಮೀ. ಇದೆ.
ಎರಡು ಮನೆಗೆ ಹಾನಿ: ಜಿಲ್ಲೆಯಲ್ಲಿ ಗಾಳಿ-ಮಳೆಗೆ ಎರಡು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಕಾಪು ತಾಲೂಕು ಕೋಟೆ ಗ್ರಾಮದ ವಿನೋಭನಗರದ ರಾಧಾ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶ: ಹಾನಿಯಾಗಿದ್ದು, 20,000ರೂ.ನಷ್ಟವಾಗಿದೆ. ಅದೇ ರೀತಿ ಬ್ರಹ್ಮಾವರ ತಾಲೂಕು ಪೆಜಮಂಗೂರು ಗ್ರಾಮದ ಸತೀಶ್ ಪೂಜಾರಿ ಎಂಬವರ ಮನೆಯ ಮೇಲೆ ಬೇವಿನ ಮರ ಬಿದ್ದು ಭಾಗಶ: ಹಾನಿಯಾದ ಬಗ್ಗೆ ವರದಿಗಳು ಬಂದಿವೆ.