ಸಮುದ್ರಕ್ಕಿಳಿಯಲು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಿದ್ಧತೆ
ಕುಂದಾಪುರ : ಕಳೆದ ಒಂದು ವಾರದಿಂದ ಕುಂದಾಪುರ, ಉಡುಪಿ ಸಹಿತ ಕರಾವಳಿಯಾದ್ಯಂತ ಅಬ್ಬರಿಸಿದ್ದ ಮಳೆ ಕಳೆದ ಮೂರು ದಿನಗಳಿಂದ ಕಡಿಮೆ ಯಾಗಿದ್ದು, ಇದರಿಂದ ಪ್ರಕ್ಷುಬ್ಧಗೊಂಡಿದ್ದ ಕಡಲು ಕೂಡ ಸ್ವಲ್ಪ ಶಾಂತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಪರಿಸ್ಥಿತಿ ನೋಡಿಕೊಂಡು ಸಾಂಪ್ರದಾಯಿಕ ನಾಡದೋಣಿಯನ್ನು ಸಮುದ್ರಕ್ಕೆ ಇಳಿಸಲು ಸಜ್ಜಾಗಿದ್ದಾರೆ.
ಕುಂದಾಪುರ, ಬೈಂದೂರು, ಉಡುಪಿ ಭಾಗದಲ್ಲಿ ರವಿವಾರ ಮಳೆ ತುಸು ಕಡಿಮೆಯಾಗಿದ್ದರೆ, ಸೋಮವಾರ ಹಾಗೂ ಮಂಗಳವಾರ ಬಿಸಿಲಿನ ವಾತಾವರಣವಿತ್ತು. ಇದರಿಂದ ಕುಂದಾಪುರ, ಬೈಂದೂರು ಭಾಗದ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ.
ಒಂದು ವಾರದ ನಿರಂತರ ಮಳೆಯಿಂದಾಗಿ ಇನ್ನೂ ಸಹ ಮೀನುಗಾರರು ಕಡಲಿಗಿಳಿಯಲು ಸೂಕ್ತ ವಾತಾವರಣವಿಲ್ಲ. ಕಳೆದೆರಡು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ಒಂದೆರಡು ದಿನಗಳಲ್ಲಿ ಸಮುದ್ರದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಣ್ಣಗೆ ಆಗುವ ಸಾಧ್ಯತೆಗಳಿದ್ದು, ಆ ಬಳಿಕ ಮೀನುಗಾರರು ಮತ್ಸ್ಯ ಬೇಟೆಗೆ ಇಳಿಯಲಿದ್ದಾರೆ.
3 ಸಾವಿರ ದೋಣಿಗಳು: ಕುಂದಾಪುರ, ಬೈಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದದ ಮಡಿಕಲ್, ಅಳ್ವೆಗದ್ದೆಯಲ್ಲಿ ನಾಡದೋಣಿ ಮೀನುಗಾರರಿದ್ದಾರೆ.
ಉಪ್ಪುಂದ ಭಾಗದಲ್ಲಿ 1,500 ನಾಡದೋಣಿಗಳಿದ್ದರೆ, ಗಂಗೊಳ್ಳಿಯಲ್ಲಿ 300 ಸಿಂಗಲ್, 35ಕ್ಕೂ ಮಿಕ್ಕಿ ಜೋಡಿ ದೋಣಿಗಳು ಸೇರಿದಂತೆ ಸುಮಾರು 600 ಕ್ಕೂ ಅಧಿಕ ನಾಡದೋಣಿಗಳಿವೆ. ಮರವಂತೆಯಲ್ಲಿ 100 ಜೋಡಿ ದೋಣಿ, 150ಕ್ಕೂ ಮಿಕ್ಕಿ ಸಿಂಗಲ್ ದೋಣಿಗಳಿವೆ.
ಈಗ ಒಂದಷ್ಟು ದಿನ ಮಳೆ ಬಿಡುವು ನೀಡಿದ್ದು, ಆದರೆ ಜು.18ರ ಅನಂತರ ಮತ್ತೊಂದು ತೂಫಾನ್ ಆಗುವ ಮುನ್ಸೂಚನೆಯಿದೆ. ಹಾಗಾಗಿ ಈಗ 4-5 ದಿನ ಮೀನುಗಾರಿಕೆ ನಡೆಸುವ ಯೋಜನೆ ಕೆಲ ಮೀನುಗಾರರದ್ದಾಗಿದ್ದರೆ, ಇನ್ನು ಕೆಲವರು ಮತ್ತೊಂದು ತೂಫಾನ್ ಆದ ಬಳಿಕವೇ ಕಡಲಿಗಿಳಿಯಲು ನಿರ್ಧರಿಸಿ ದ್ದಾರೆ ಎಂದು ತಿಳಿದು ಬಂದಿದೆ.
‘ಮಳೆ ಕಡಿಮೆಯಾದರೂ ಏಕಾಏಕಿ ಕಡಲಿಗಿಳಿಯುವುದು ಕಷ್ಟ. ಇನ್ನೂ ಕೂಡ ಸಮುದ್ರ ಸ್ವಲ್ಪಮಟ್ಟಿಗೆ ಅಬ್ಬರದಿಂದ ಕೂಡಿದ್ದು, ಇನ್ನು ಒಂದೆರಡು ದಿನಗಳಲ್ಲಿ ಕಡಲಿಗಿಳಿಯುವ ಬಗ್ಗೆ ತೀರ್ಮಾನಿಸಲಾಗುವುದು. ಮುಂದಿನ ವಾರ ಮತ್ತೊಂದು ತೂಫಾನ್ ಅಪ್ಪಳಿಸುವ ಬಗ್ಗೆಯೂ ಮಾಹಿತಿ ಇದೆ. ಅದಕ್ಕಿಂತ ಮೊದಲು ಒಮ್ಮೆ ಸಮುದ್ರಕ್ಕೆ ಇಳಿಯಲು ಸಿದ್ಧತೆ ಮಾಡಿದ್ದೇವೆ.
-ವಾಸುದೇವ ಖಾರ್ವಿ, ಅಧ್ಯಕ್ಷರು, ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ, ಮರವಂತೆ