ಆಸ್ತಿ ಕಬಳಿಸುವ ಲ್ಯಾಂಡ್ ಮಾಫಿಯಾದಿಂದ ಹುನ್ನಾರ: ಅಮೃತ್ ಶೆಣೈ ಆರೋಪ
ಅಮೃತ್ ಶೆಣೈ
ಉಡುಪಿ, ಜೂ.25: ‘ನನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರದ ಹಿಂದೆ ನನ್ನನ್ನು ಮಾನಸಿಕವಾಗಿ ಕುಗ್ಗಿಸಿ ಮಾನಹಾನಿ ಮಾಡಿ, ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಕಬಳಿಸುವ ಲ್ಯಾಂಡ್ ಮಾಫಿಯಾದ ಹುನ್ನಾರ ಅಡಗಿದೆ’ ಎಂದು ಉಡುಪಿ ಶ್ರೀಲಕ್ಷ್ಮೀ ಇನ್ಫ್ರಾಸ್ಟ್ರಕ್ಚರ್ನ ಮಾಲಕ ಅಮೃತ್ ಶೆಣೈ ಆರೋಪಿಸಿದ್ದಾರೆ.
ವೈಜರ್ ವಸತಿ ಸಮುಚ್ಛಾಯದ ಫ್ಲ್ಯಾಟ್ ಮಾರಾಟದ ವಿವಾದಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಸತಿ ಸಮುಚ್ಛಯ ನಿರ್ಮಾಣಕ್ಕಾಗಿ ಬ್ಯಾಂಕಿನಿಂದ 5.4ಕೋಟಿ ಸಾಲ ಪಡೆದು ಕೊಂಡಿದ್ದು, ಈವರೆಗೆ ನಾನು 6 ಕೋಟಿ ರೂ. ಬ್ಯಾಂಕಿಗೆ ಪಾವತಿಸಿದ್ದೇನೆ. ಇದೀಗ ಬ್ಯಾಂಕ್ ಮತ್ತೆ ಐದು ಕೋಟಿ ರೂ. ಸಾಲ ಇದೆ ಎಂಬುದಾಗಿ ಹೇಳುತ್ತಿದೆ. ಈ ಬಗ್ಗೆ 2.5ಕೋಟಿ ರೂ. ಒನ್ಟೈಮ್ ಸೆಟ್ಲ್ಮೆಂಟ್ ಮೂಲಕ ಪಾವತಿಸಲು ಬ್ಯಾಂಕ್ ಒಪ್ಪಿದೆ ಎಂದರು.
ಇದಕ್ಕಾಗಿ ಹೂಡಿಕೆದಾರರು ಕೂಡ ಮುಂದೆ ಬಂದಿದ್ದಾರೆ. ಇದೀಗ ನನ್ನ ಬಗ್ಗೆ ಅಪಪ್ರಚಾರ ಮಾಡಿದ ಪರಿಣಾಮ ಈ ಹೂಡಿಕೆ ದಾರರು ಹಿಂದೇಟು ಹಾಕುವ ಸಾಧ್ಯತೆ ಇದೆ. ಅಂತಿಮವಾಗಿ ಬ್ಯಾಂಕಿನವರು ಈ ವಸತಿ ಸಮುಚ್ಛಯವನ್ನು ಸ್ವಾಧೀನಪಡಿಸಿಕೊಳ್ಳಬಹುದು. ಇದರಿಂದ ಇದರಲ್ಲಿ ರುವ ಫ್ಲ್ಯಾಟ್ನವರು ಬೀದಿ ಪಾಲಾಗಲಿದ್ದಾರೆ ಎಂದು ಅವರು ತಿಳಿಸಿದರು.
ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಎಲ್ಲಿಯೂ ತಲೆಮರಿಸಿಕೊಂಡಿಲ್ಲ. ಕಾಲು ನೋವಿನ ಸಮಸ್ಯೆಯಿಂದ ಮನೆಯಲ್ಲೆ ಇದ್ದೇನೆ. ಒಂದು ಫ್ಲ್ಯಾಟ್ನ್ನು ಇಬ್ಬರು, ಮೂವರಿಗೆ ಮಾರಾಟ ಮಾಡಿದ್ದೇನೆ ಎಂಬ ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ. ಪೊಲೀಸರಿಗೆ ನೀಡಿದ ದೂರಿನಲ್ಲೂ ಯಾವುದೇ ಪೂರಕ ದಾಖಲೆಗಳಿಲ್ಲ. ನಾನು ವಸತಿ ಸಮುಚ್ಛಯದಲ್ಲಿ ಬೌನ್ಸರ್ಗಳನ್ನು ಇಟ್ಟಿಲ್ಲ. ಸಂಬಂಧ ಇಲ್ಲದವರು ಕಟ್ಟಡದೊಳಗೆ ಬಾರದಂತೆ ತಡೆಯಲು ಸುಪರ್ವೈಸರ್ ಗಳನ್ನು ನೇಮಕ ಮಾಡಿದ್ದೇನೆ. ನನ್ನ ಫ್ಲ್ಯಾಟ್ಗೆ ನಾನು ಸಿಬ್ಬಂದಿಗಳನ್ನು ನೇಮಕ ಮಾಡಿ ಕಾಪಾಡುವುದು ನನ್ನ ಹಕ್ಕು ಎಂದು ಅವರು ಸ್ಪಷ್ಟಪಡಿಸಿದರು.
ನನ್ನ ವಿರುದ್ಧ ಆರೋಪ ಮಾಡುತ್ತಿರುವ ಶೇ.50ರಷ್ಟು ಮಂದಿ ನನ್ನ ವಸತಿ ಸಮುಚ್ಛಯದಲ್ಲಿ ಫ್ಲ್ಯಾಟ್ನ್ನು ಖರೀದಿಸಿಲ್ಲ. 36 ಫ್ಲ್ಯಾಟ್ಗಳಲ್ಲಿ 26 ಫ್ಲ್ಯಾಟ್ ಗಳನ್ನು ಮಾರಾಟ ಮಾಡಿದ್ದು, ಯಾರು ಕೂಡ ಈವರೆಗೆ ಪೂರ್ಣಪ್ರಮಾಣ ದಲ್ಲಿ ಹಣವನ್ನು ಪಾವತಿಸಿಲ್ಲ. ಖರೀದಿಸಿದ 16 ಫ್ಲ್ಯಾಟ್ಗಳಲ್ಲಿ ಮಾತ್ರ ಜನ ವಾಸವಾಗಿದ್ದಾರೆ. ಇನ್ನುಳಿದ 10 ಫ್ಲ್ಯಾಟ್ಗಳು ನನ್ನಲ್ಲಿಯೇ ಇದೆ ಎಂದು ಅವರು ಹೇಳಿದರು.
ನೋಟು ಅಮಾನ್ಯ, ಮರಳು ಅಲಭ್ಯ, ಕೋವಿಡ್ ಲಾಕ್ಡೌನ್ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಪಾರ್ಕಿಂಗ್, ಲಿಫ್ಟ್ ಸಹಿತ ವಸತಿ ಸಮುಚ್ಛಯದ ಶೇ.5 ಕಾಮಗಾರಿ ಬಾಕಿ ಉಳಿದುಕೊಂಡಿದೆ. ಇದರಿಂದಾಗಿ ಡೋರ್ನಂಬರ್ ಸಿಗದೆ, ನೋಂದಣಿ ಪ್ರಕ್ರಿಯೆಗೆ ಸಮಸ್ಯೆಯಾಗಿದೆ. ನನ್ನ ವಿರುದ್ದ ಆರೋಪ ಮಾಡಿರುವ ವಕೀಲ ಗಿರೀಶ್ ಐತಾಳ್ ಸೇರಿದಂತೆ ಹಲವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಮಾಡಲಾಗುವುದು ಎಂದು ಅಮೃತ್ ಶೆಣೈ ತಿಳಿಸಿದರು.