ಪುತ್ತೂರು ಶವಾಗಾರ ಸಿಬ್ಬಂದಿ ವಿರುದ್ಧ ಲಂಚ ಆರೋಪ: ಪರೀಕ್ಷೆ ನಡೆಸದೆ ಪ್ರತಿಭಟಿಸಿದ ಹೊರಗುತ್ತಿಗೆ ಸಿಬ್ಬಂದಿ
"ಶವಗಳ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿ ನಾವು ಯಾರಲ್ಲೂ ಹಣ ಕೇಳಿ ಪಡೆಯುತ್ತಿಲ್ಲ"
ಪುತ್ತೂರು : ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಲು ಅಲ್ಲಿನ ಸಿಬ್ಬಂದಿ ಲಂಚದ ಬೇಡಿಕೆ ಮುಂದಿಡುತ್ತಿದ್ದಾರೆ, ಲಂಚ ನೀಡಿದರೆ ಮಾತ್ರ ಶವದ ಮರಣೋತ್ತರ ಪರೀಕ್ಷೆ ನಡೆಸುತ್ತಾರೆ ಎಂದು ಸಂಘಟನೆಯೊಂದು ಮಾಡಿರುವ ಆರೋಪವನ್ನು ವಿರೋಧಿಸಿ, ಮರಣೋತ್ತರ ಪರೀಕ್ಷೆಗೆ ಸಹಕರಿಸುತ್ತಿದ್ದ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿ ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಸಹಕರಿಸದೆ ಶನಿವಾರ ಪ್ರತಿಭಟನೆ ನಡೆಸಿದರು.
ಶವಗಳ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿ ನಾವು ಯಾರಲ್ಲೂ ಹಣ ಕೇಳಿ ಪಡೆಯುತ್ತಿಲ್ಲ. ಕೊಟ್ಟದ್ದನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೇವೆ. ಆದರೆ ಏಕಾಏಕಿಯಾಗಿ ಚಿಕ್ಕಮುಡ್ನೂರಿನ ಕಲಿಯುಗ ಸೇವಾ ಸಮಿತಿಯವರು ನಮ್ಮ ಮೇಲೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಲಂಚದ ಸುಳ್ಳು ಆರೋಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮರಣೋತ್ತರ ಪರೀಕ್ಷೆಗೆ ಸಹಕರಿಸುತ್ತಿದ್ದ ಹೊರಗುತ್ತಿಗೆ ಸಿಬ್ಬಂದಿಗಳು ತಮ್ಮ ಮೇಲಿನ ಆರೋಪ ವನ್ನು ವಿರೋಧಿಸಿ ಆಸ್ಪತ್ರೆಯಲ್ಲಿದ್ದ ಎರಡು ಶವಗಳ ಮರಣೋತ್ತರ ಪರೀಕ್ಷೆಗೆ ಸಹಕರಿಸದೆ ಪ್ರತಿಭಟನೆಗಿಳಿದರು.
ಹೃದಯಾಘಾತಕ್ಕೊಳಗಾಗಿ ನಿಧನರಾದ ಬೆಳ್ಳಾರೆಯ ಶರತ್ ಜೋಷಿ(22) ಮತ್ತು ಉಪ್ಪಿನಂಗಡಿಯ ನಟ್ಟಿಬೈಲಿನಲ್ಲಿ ವಾಸ್ತವ್ಯವಿದ್ದು ಸಿಮೆಂಟ್ ರಿಂಗ್ ತಯಾರಿಕೆ ವೃತ್ತಿ ನಡೆಸುತ್ತಿದ್ದ ಕೇರಳದ ಕೊಲ್ಲಂನ ರಾಜನ್ (51) ಅವರ ಮೃತದೇಹಗಳನ್ನು ಆಶ್ಪತ್ರೆಯ ಶವಾಗಾರಕ್ಕೆ ತಂದು ಇರಿಸಲಾಗಿತ್ತು. ಮೃತದೇಹಗಳ ಶವ ಮಹಜರು ಪ್ರಕ್ರಿಯೆನ್ನು ಪೊಲೀಸರು ನಡೆಸಿದ್ದರೂ ಆಸ್ಪತ್ರೆಯ ಹೊರಗುತ್ತಿದೆ ಸಿಬ್ಬಂದಿ ಶವಗಳ ಮರಣೋತ್ತರ ಪರೀಕ್ಷೆಗೆ ಸಹಕರಿಸದೆ ಪ್ರತಿಭಟನೆಗಿಳಿದ ಕಾರಣ ಮೃತರ ಕುಟುಂಬಸ್ಥರು ಸಂಕಷ್ಟ ಅನುಭವಿಸುವಂತಾಯಿತು.
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಆಸ್ಪತ್ರೆಯ ವೈದ್ಯ ಡಾ.ಯದುರಾಜ್ ಅವರು ಪ್ರತಿಭಟನಾ ನಿರತ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಪ್ರಸ್ತುತ ಆಸ್ಪತ್ರೆಯಲ್ಲಿರುವ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಸಹಕರಿಸುವಂತೆ ವೈದ್ಯರು ಮನವಿ ಮಾಡಿಕೊಂಡರು. ಬಳಿಕ ಸಿಬ್ಬಂದಿ ಶವಾಗಾರದ ಬಾಗಿಲು ತೆರೆದು ಮರಣೋತ್ತರ ಪರೀಕ್ಷೆ ನಡೆಸಿದರು.
"ಆಸ್ಪತ್ರೆಯಲ್ಲಿ 34 ಬಿ ಗ್ರೂಪ್ ಹುದ್ದೆಗಳಲ್ಲಿ ಇಬ್ಬರು ಮಾತ್ರ ಇರುವುದೇ ದೊಡ್ಡ ಸಮಸ್ಯೆ. ಶವಗಳ ಮರಣೋತ್ತರ ಪರೀಕ್ಷೆಗೆ ವೈದ್ಯರೊಂದಿಗೆ ಹೊರಗುತ್ತಿಗೆ ಆಧಾರದ ಮೂವರು ಸಿಬ್ಬಂದಿ ಹಾಗೂ ಸಹಾಯಕರಾಗಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಭಾವನೆಯೂ ಬಹಳ ಕಡಿಮೆಯಿದ್ದು, ಕೆಲವೊಂದು ಸಂದರ್ಭಗಳಲ್ಲಿ ರಾತ್ರಿ ವೇಳೆಯೂ ಅವರು ಬರಬೇಕಾಗುತ್ತದೆ. ಎಲ್ಲರೂ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಪುತ್ತೂರು ಆಸ್ಪತ್ರೆ ಜಿಲ್ಲೆಯಲ್ಲೇ ಹೆಸರು ಪಡೆದ ಆಸ್ಪತ್ರೆಯಾಗಿದೆ. ಆದರೂ ವೈದ್ಯರ ಮತ್ತು ಸಿಬ್ಬಂದಿ ಮೇಲೆ ಆರೋಪ ಮಾಡುವ ಮೂಲಕ ಆಸ್ಪತ್ರೆಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಲಾಗಿದೆ. ಆರೋಪ ಮಾಡುವವರು ಯಾರು ಲಂಚ ಪಡೆಯುತ್ತಾರೆ ಎಂಬುವುದನ್ನು ಸ್ಪಷ್ಟ ಪಡಿಸಬೇಕು. ಇಲ್ಲದಿದ್ದಲ್ಲಿ ತಮ್ಮ ಆರೋಪವನ್ನು ಹಿಂಪಡೆಯಬೇಕು"
-ಡಾ.ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿ.
"ಮರಣೋತ್ತರ ಪರೀಕ್ಷೆ ಮಾಡುವ ಅಧಿಕಾರ ಇರುವುದು ಸರ್ಕಾರಿ ನೌಕರರಿಗೆ ಮಾತ್ರ. ಹೊರಗುತ್ತಿಗೆ ನೌಕರರು ಮಾಡುವ ಆಗಿಲ್ಲ. ನಾವು ಅಲ್ಪ ಸ್ವಲ್ಪ ಸಂಬಳಕ್ಕೆ ದುಡಿಯುವವರು. ಆದರೂ ನಾವು ಮಾನವೀಯತೆಯ ದೃಷ್ಟಿಯಿಂದ ಮರಣೋತ್ತರ ಪರೀಕ್ಷೆ ಕೆಲಸ ಮಾಡುತ್ತಿದ್ದೇವೆ. ಕೊಟ್ಟದ್ದನ್ನು ತೆಗೆದುಕೊಳ್ಳುತ್ತಿರುವುದು ನಿಜ. ಆದರೆ ನಾವು ಲಂಚ ಕೇಳಿ ಪಡೆಯುತ್ತಿಲ್ಲ. ಆದರೂ ನಮ್ಮ ಮೇಲೆ ಆಧಾರವಿಲ್ಲದೆ ಆರೋಪ ಮಾಡಿದ್ದಾರೆ. ಈ ಬೇಸರದಿಂದ ನಾವು ಮರಣೋತ್ತರ ಪರೀಕ್ಷೆ ನಡೆಸದೆ ಪ್ರತಿಭಟನೆ ಮಾಡಿದ್ದೇವೆ".