ಸರಕಾರಿ ಬಸ್‌ಗಳ ಸಂಚಾರ ಆರಂಭಿಸಲು ಆಗ್ರಹಿಸಿ ಪ್ರತಿಭಟನೆ
ಮಂಗಳೂರು: ರಾಜ್ಯ ಸರಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಯು ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಮಹಿಳೆಯರಿಗೂ ಸಿಗುವಂತಾಗಲು ಎರಡೂ ಜಿಲ್ಲೆಯ ಎಲ್ಲಾ ರೂಟ್‌ಗಳಲ್ಲೂ ಸರಕಾರಿ ಬಸ್‌ಗಳ ಸಂಚಾರ ಆರಂಭಿಸಲು ಕ್ರಮ ಜರಗಿಸಬೇಕು. ಅದು ಬಿಟ್ಟು, ಸಾರಿಗೆ ಅಧಿಕಾರಿಗಳು ಖಾಸಗಿ ಬಸ್ ಮಾಲಕರ ಅಣತಿಯಂತೆ ನಡೆದು ಜನವಿರೋಧಿ ಧೋರಣೆ ತಾಳಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಿಗೆ ಸರಕಾರಿ ಬಸ್ ಸಂಚಾರ ಆರಂಭಿಸಲು ಒತ್ತಾಯಿಸಿ ಹಾಗೂ ವಿವಿಧ ಸಾರಿಗೆ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸುರತ್ಕಲ್ ಟೋಲ್‌ಗೇಟ್ ಮುಚ್ಚಿ ಎಂಟು ತಿಂಗಳಾದರೂ ಟೋಲ್ ಹೆಸರಿನಲ್ಲಿ ಪ್ರಯಾಣಿಕರ ಟಿಕೆಟ್ ಮೇಲೆ ೫ ರೂ.ಸುಲಿಗೆ ಮಾಡುತ್ತಿರುವ ಖಾಸಗಿ ಬಸ್ ಮಾಲಕರ ವಿರುದ್ಧ ಕ್ರಮ ಕೈಗೊಳ್ಳದೆ, ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆ ನಡೆಸದೆ ಜಿಲ್ಲಾಡಳಿತ ಲೂಟಿಯ ಪರವಾಗಿ ನಿಂತಿರುವುದನ್ನು ಖಂಡಿ ಸಿದ ಅವರು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ದರ್ಬಾರನ್ನು ಕೊನೆಗೊಳಿಸಲು ಜಿಲ್ಲೆಯ ಜನರು ಪ್ರತಿ ಗ್ರಾಮಗಳಿಗೆ ಸರಕಾರಿ ಬಸ್ಸಿನ ಬೇಡಿಕೆ ಸಲ್ಲಿಸಬೇಕು ಎಂದು ಬಿ.ಕೆ.ಇಮ್ತಿಯಾಝ್ ಕರೆ ನೀಡಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ನಗರಕ್ಕೆ ಈಗಾಗಲೇ ೬೮ ಮಂಜೂರಾಗಿರುವ ಸರಕಾರಿ ನರ್ಮ್ ಬಸ್‌ನಲ್ಲಿ ೩೫ ಬಸ್ಸುಗಳಷ್ಟೇ ಓಡಾಟ ಮಾಡುತ್ತಿದೆ. ಸರಕಾರ ಕೂಡಲೇ ಹೊಸ ಬಸ್ಸುಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು. ನಗರದ ಸ್ಟೇಟ್‌ಬ್ಯಾಂಕ್‌ನಿಂದ ಈ ಹಿಂದೆ ಸಂಚರಿಸುತ್ತಿದ್ದ ನರ್ಮ್ ಬಸ್ ಓಡಾಡುವಂತೆ ನೋಡಿಕೊಳ್ಳಬೇಕು. ಪುತ್ತೂರು, ಬೆಳ್ತಂಗಡಿ ನಡುವೆ ಸರಕಾರಿ ಬಸ್ ಓಡಾಡುವಂತೆ ಮಂಗಳೂರು- ಮೂಡುಬಿದಿರೆ-ಕಾರ್ಕಳ ನಡುವೆಯೂ ಸರಕಾರಿ ಬಸ್‌ಗಳು ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ್ ನಾಯಕ್ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ನಗರ ಘಟಕದ ಅಧ್ಯಕ್ಷ ಜಗದೀಶ್ ಬಜಾಲ್, ಕೋಶಾಧಿಕಾರಿ ತಯ್ಯೂಬ್ ಬೆಂಗರೆ, ಸೈಫರ್ ಆಲಿ, ರಫೀಕ್ ಹರೇಕಳ, ಹನೀಫ್ ಬೆಂಗರೆ, ಮುಸ್ತಫಾ ಕಲ್ಲಕಟ್ಟೆ, ಮನೋಜ್ ಉರ್ವಸ್ಟೋರ್, ರಿಹಾಬ್, ನಾಸಿರ್, ಜೆರಾಲ್ಡ್ ಟವರ್ ಪಾಲ್ಗೊಂಡಿದ್ದರು.