ಉಡುಪಿ ಜಿಲ್ಲೆಯಲ್ಲಿ ಮಳೆ ಇಳಿಮುಖ; ಎರಡು ಮನೆಗಳಿಗೆ ಹಾನಿ
ಉಡುಪಿ, ಜೂ.26: ನಿರೀಕ್ಷೆಯ ಪ್ರಮಾಣದಲ್ಲಿ ಇನ್ನೂ ಜಿಲ್ಲೆಯಲ್ಲಿ ಸುರಿಯದ ಮಳೆಯಲ್ಲಿ ಇಂದು ಇಳಿಮುಖ ಕಂಡುಬಂದಿದೆ. ರವಿವಾರಕ್ಕೆ ಹೋಲಿಸಿದರೆ ಇಂದು 17ಮಿ.ಮೀನಷ್ಟು ಮಳೆ ಕಡಿಮೆ ಬಿದ್ದಿದೆ. ಇಂದು ಬೆಳಗ್ಗೆ ಮುಕ್ತಾಯಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 42.6ಮಿ.ಮೀ.ಮಾತ್ರ ಮಳೆ ಸುರಿದಿದೆ.
ಕಾಪುವಲ್ಲಿ 54.0ಮಿ.ಮೀ. ಮಳೆಯಾದರೆ, ಹೆಬ್ರಿಯಲ್ಲಿ 51.9, ಉಡುಪಿಯಲ್ಲಿ 49.4, ಬ್ರಹ್ಮಾವರದಲ್ಲಿ 47.2, ಕಾರ್ಕಳದಲ್ಲಿ 42.8, ಬೈಂದೂರಿನಲ್ಲಿ 39.1 ಹಾಗೂ ಕುಂದಾಪುರದಲ್ಲಿ 32.9ಮಿ.ಮೀ.ನಷ್ಟು ಮಳೆಯಾಗಿದೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.
ನಿನ್ನೆಯ ಗಾಳಿ-ಮಳೆಯಿಂದ ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿ ರುವ ಬಗ್ಗೆ ಮಾಹಿತಿ ಬಂದಿದೆ. ಕಾಪು ತಾಲೂಕು 92 ಹೇರೂರು ಗ್ರಾಮದ ಸವಿತಾ ಎಸ್. ಆಚಾರ್ಯರ ಮನೆಯ ಮೇಲ್ಚಾವಣಿ ಹಾರಿಹೋಗಿ ಭಾಗಶ: ಹಾನಿಯಾಗಿದ್ದು ೨೫ ಸಾವಿರ ರೂ.ನಷ್ಟವಾಗಿದೆ. ಬೈಂದೂರು ತಾಲೂಕು ಮರವಂತೆ ಗ್ರಾಮದ ಮಂಜುನಾಥ ಎಂಬವರ ಮನೆಯ ಮೇಲ್ಚಾವಣಿಗೆ ಭಾಗಶ ಹಾನಿಯಾಗಿ 45,000ರೂ.ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ದಿನದ ಗರಿಷ್ಠ ಉಷ್ಣಾಂಶ 30ಡಿಗ್ರಿ ಸೆಲ್ಷಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 24 ಡಿಗ್ರಿ ಆಗಿತ್ತು. ಮುಂದಿನ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಗುಡುಗು-ಮಿಂಚಿನ ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 45ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.