ಶ್ಯಾಮಪ್ರಸಾದ್ ಮುಖರ್ಜಿ ಸಂಶಯಾಸ್ಪದ ಸಾವು ಇಂದಿಗೂ ನಿಗೂಢ: ಕುಯಿಲಾಡಿ
ಉಡುಪಿ, ಜೂ.25: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದ ಮುಖರ್ಜಿ ಸ್ವತಂತ್ರ ಭಾರತದ ಪ್ರಥಮ ಕೈಗಾರಿಕಾ ಮಂತ್ರಿ ಯಾಗಿದ್ದರು. ಸರಕಾರದ ತುಷ್ಟೀಕರಣ ನೀತಿಯನ್ನು ವಿರೋಧಿಸಿ ನೆಹರೂ ಸಂಪುಟಕ್ಕೆ ರಾಜೀನಾಮೆ ನೀಡಿದರು. ಕಾಶ್ಮೀರದ ವಿಮೋಚನೆಗೆ ಹೋರಾಡುತ್ತಾ ಹುತಾತ್ಮರಾದ ಅವರ ಸಂಶಯಾಸ್ಪದ ಸಾವು ಇಂದಿಗೂ ನಿಗೂಢವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆರೋಪಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಶುಕ್ರವಾರ ನಡೆದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡುತಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಕನಸನ್ನು ನನಸುಗೊಳಿಸಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಂ.ಸುವರ್ಣ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಳಾದ ರಶ್ಮಿತಾ ಬಿ.ಶೆಟ್ಟಿ, ಪ್ರಮೀಳಾ ಹರೀಶ್, ಬಿಜೆಪಿ ಉಡುಪಿ ಗ್ರಾಮಾಂತರ ಮಂಡಲಾಧ್ಯಕ್ಷೆ ವೀಣಾ ನಾಯ್ಕ್ ಉಪಸ್ಥಿತರಿದ್ದರು.