ಮಲಮಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಸೆರೆ
ಸೊಹೇಲ್
ಕುಂದಾಪುರ, ಜು.12: ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ತನ್ನ ಅಪ್ರಾಪ್ತ ವಯಸ್ಸಿನ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪೊಕ್ಸೋ ಪ್ರಕರಣದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬೈಂದೂರಿನ ನಿವಾಸಿ ಸೊಹೇಲ್ ಬಂಧಿತ ಆರೋಪಿ. ಇಬ್ಬರು ಮಕ್ಕಳಿದ್ದ ಹೊರ ರಾಜ್ಯದ ಮಹಿಳೆಯೊಬ್ಬರು ಪತಿಯನ್ನು ತ್ಯಜಿಸಿ, ಬಳಿಕ ಸೊಹೇಲ್ ನನ್ನು ಪ್ರೀತಿ ಮದುವೆಯಾಗಿದ್ದರು. ನಂತರ ಇವರಿಬ್ಬರು ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಮಹಿಳೆಯ ಮಗಳಿಗೆ ಸೊಹೇಲ್ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅದಕ್ಕಾಗಿ ಆಕೆ ಆತನಿಂದ ದೂರ ಹೋಗಿ ಬೇರೆಡೆ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು.
ಬಾಡಿಗೆ ಮನೆಯಲ್ಲಿದ್ದ ಆಕೆ ಹಾಗೂ ಅವಳ ಮಗಳನ್ನು ಆತನ ಮನೆಗೆ ಕರೆದೊಯ್ದು ಇಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು ಎಂದು ದೂರಲಾಗಿದೆ. ಬಿಡಿಸಲು ಬಂದ ಬಾಲಕಿಯ ತಾಯಿಗೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದನು. ಬಳಿಕ ಮಹಿಳೆ ಆರೋಪಿಯನ್ನು ದೂಡಿ ತನ್ನ ಮಗಳನ್ನು ಆತನಿಂದ ತಪ್ಪಿಸಿಕೊಂಡು ಬಂದಿದ್ದಳು. ಈ ಬಗ್ಗೆ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.