ಉಡುಪಿ: ವಿದ್ಯಾರ್ಥಿನಿಯ ಸಂಶಯಾಸ್ಪದ ಸಾವು; ಎಬಿವಿಪಿಯಿಂದ ಪ್ರತಿಭಟನೆ
ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ
ಉಡುಪಿ, ಜೂ.23: ಮಂಗಳೂರು ಕೆಪಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪಡುಬಿದ್ರಿ ಸಮೀಪದ ಎರ್ಮಾಳು ನಿವಾಸಿ ನಿಖಿತಾ (20) ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಸ್ಪತ್ರೆ ಎದುರು ಶುಕ್ರವಾರ ಪ್ರತಿಭಟನೆಯೊಂದಿಗೆ ಆಸ್ಪತ್ರೆಗೆ ಮುತ್ತಿಗೆ ಹಾಕುವ ಪ್ರಯತ್ನವನ್ನೂ ನಡೆಸಿತು.
ನಿಖಿತಾ ಸಾವಿನ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಸೂಕ್ತ ತನಿಖೆ ನಡೆಸಿ, ಕುಟುಂಬಕ್ಕೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಪ್ರತಿಭಟನಕಾರರು ಘೋಷಣೆ ಕೂಗಿ ಒತ್ತಾಯಿಸಿದರು. ಆಸ್ಪತ್ರೆ ಆವರಣ ಪ್ರವೇಶಿಸುವ ಯತ್ನವನ್ನು ಪೊಲೀಸರು ಬ್ಯಾರಿಕೇಡ್ ಅಳವಡಿಸಿ ತಡೆದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಬಂದ ವಿದ್ಯಾರ್ಥಿ ಗಳನ್ನು ಪೊಲೀಸರು ರಸ್ತೆಯಲ್ಲೇ ತಡೆದು ನಿಲ್ಲಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.
ಬೆನ್ನುನೋವಿಗಾಗಿ ಜೂ.14ರಂದು ಎರ್ಮಾಳಿನ ಜನಾರ್ದನ ಮೂಲ್ಯ ಹಾಗೂ ಶೋಭಾ ಅವರ ಏಕೈಕ ಪುತ್ರಿ ನಿಖಿತಾರನ್ನು ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಶನಿವಾರ ಆಕೆಯ ಶಸ್ತ್ರಚಿಕಿತ್ಸೆ ನಡೆದಿದ್ದು, ರವಿವಾರ ಬೆಳಗ್ಗೆ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿ ಮೃತ ಪಟ್ಟಿದ್ದರು. ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಸಾವಿಗೀಡಾಗಿದ್ದಾಳೆ ಎನ್ನುವ ಆರೋಪ ಕೇಳಿಬಂದಿತ್ತು.
ಇಡೀ ಪ್ರಕರಣದ ಬಗ್ಗೆ ಶೀಘ್ರವೇ ಸಮಗ್ರ ತನಿಖೆ ನಡೆಸಬೇಕು. ಚಿಕಿತ್ಸೆಯ ನಿರ್ಲಕ್ಷ್ಯದಿಂದಲೇ ನಿಖಿತಾ ಸಾವನ್ನಪ್ಪಿದ್ದರೆ, ಸಂಬಂಧಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿತ್ತು.
ಮಳೆಯ ನಡುವೆ ವಿದ್ಯಾರ್ಥಿಗಳು ರಸ್ತೆಯಲ್ಲೇ ಕುಳಿತು ನ್ಯಾಯ ಆಗ್ರಹದ ಘೋಷಣೆ ಕೂಗಿದರು. ಮೃತ ವಿದ್ಯಾರ್ಥಿನಿಯ ಹೆತ್ತವರು ಆಸ್ಪತ್ರೆ ಬಳಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಣ್ಣೀರು ಹಾಕಿದರು.
ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ ಪೊಲೀಸ್ ಬಂದೋಬಸ್ತಿನ ನೇತೃತ್ವ ವಹಿಸಿದ್ದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಕೊಯಿಲ ಮಾತನಾಡಿ, ವಿದ್ಯಾರ್ಥಿನಿ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದರು. ಹೆಚ್ಚುವರಿ ಎಸ್ಪಿ, ಡಿಎಚ್ಒ, ತಾಲೂಕು ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಆಸ್ಪತ್ರೆ ವತಿಯಿಂದ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ವಾರದೊಳಗೆ ನ್ಯಾಯ ಒದಗಿಸದಿದ್ದಲ್ಲಿ ರಾಜ್ಯದಾದ್ಯಂತ ಎಬಿವಿಪಿ ಪ್ರತಿಭಟನೆ ನಡೆಸಲಿದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು. ಕೊನೆಗೆ ಆಸ್ಪತ್ರೆಯ ವೈದ್ಯರು ಆಗಮಿಸಿ ಮೃತ ವಿದ್ಯಾರ್ಥಿನಿ ನಿಖಿತಾಗೆ ನೀಡಿದ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಬಳಿಕ ವಿದ್ಯಾರ್ಥಿಗಳು ಚದುರಿದರು.
ಸಮಗ್ರ ತನಿಖೆಗೆ ಎನ್ಎಸ್ಯುಐ ಆಗ್ರಹ: ಕೆಪಿಟಿಯ ಡಿಪ್ಲೋಮಾ ವಿದ್ಯಾರ್ಥಿನಿ ನಿಖಿತಾ ಅವರ ನಗರದ ಆಸ್ಪತ್ರೆಯಲ್ಲಿ ಸಂಶಯಾಸ್ಪದ ಸಾವಿನ ಕುರಿತಂತೆ ಸಮಗ್ರ ತನಿಖೆ ನಡೆಸಿ ವೈದ್ಯರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ)ನ ಉಡುಪಿ ಜಿಲ್ಲಾ ಅಧ್ಯಕ್ಷ ಸೌರಭ ಬಲ್ಲಾಳ್ ಆಗ್ರಹಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎನ್ಎಸ್ ಯುಐ ನಿಯೋಗವೊಂದು ನಿನ್ನೆ ಮೃತ ನಿಖಿತಾಳ ಮನೆಗೆ ಭೇಟಿ ನೀಡಿ ಹೆತ್ತವರನ್ನು ಮಾತನಾಡಿಸಿದೆ. ಏಕೈಕ ಮಗಳ ಅನಿರೀಕ್ಷಿತ ಸಾವಿನಿಂದ ಕಂಗೆಟ್ಟಿರುವ ಅವರು ಪೋಸ್ಟ್ಮಾರ್ಟಂಗೆ ಒಪ್ಪಿಲ್ಲ. ಹಾಗೂ ಯಾವುದೇ ಪ್ರಕರಣ ದಾಖಲಿಸಲು ಒಪ್ಪುತ್ತಿಲ್ಲ. ಇದೀಗ ಅವರ ಪರವಾಗಿ ನಮ್ಮ ಸಂಘಟನೆಯೇ ಪ್ರಕರಣ ದಾಖಲಿಸಲು ಸಿದ್ಧವಿದೆ ಎಂದರು.
ಪ್ರಕರಣದ ಕುರಿತು ತನಿಖೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು, ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ನಿಖಿತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿ ಎಂಬುದು ತಮ್ಮ ಒತ್ತಾಯವಾಗಿದೆ ಎಂದರು. ಈ ಸಂದರ್ಭದಲ್ಲಿ ಶಿರಾಜ್ ಶೇಖ್, ರಕ್ಷಿತರಾಜ್, ಅಮನ್ಜಾನ್ ಉಪಸ್ಥಿತರಿದ್ದರು.
ಆಸ್ಪತ್ರೆಯ ಸ್ಪಷ್ಟೀಕರಣ
ವಾಂತಿ, ಹೊಟ್ಟೆನೋವು, ಮಲವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದ ನಿಖಿತಾ ಜೂ. 14ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಮೂಲಕ ಕಾರಣ ಪತ್ತೆ ಹಚ್ಚಿ ಆಕೆಗೆ ಸೂಕ್ತ ಚಿಕಿತ್ಸೆ ನೀಡಿದ್ದು ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ. ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಹಠಾತ್ತನೆ ಆರೋಗ್ಯದಲ್ಲಿ ಏರುಪೇರಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಸಾವಿಗೆ ನೈಜ ಕಾರಣ ಪತ್ತೆ ಹಚ್ಚಲು ಪೂರಕವಾದ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲಿಲ್ಲ ಎಂದು ಖಾಸಗಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.