ಚಿಂತನಾ ಸಭೆ ನಡೆಸುವ ಮೂಲಕ ಬಿಲ್ಲವ ಸಮಾಜವನ್ನು ಜಾಗೃತಿಗೊಳಿಸಲಾಗುವುದು : ಪ್ರಣಾವಾನಂದ ಸ್ವಾಮೀಜಿ
ಬಂಟ್ವಾಳ : ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು 18 ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿ, 49 ವರ್ಷ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.
ಮೆಲ್ಕಾರ್‌ನ ಬಿರ್ವ ಸಭಾಂಗಣದಲ್ಲಿ ರವಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜನಾರ್ದನ ಪೂಜಾರಿ ಯವರನ್ನು ಮೂಲೆ ಗುಂಪು ಮಾಡಿದಂತೆ ಬಿ.ಕೆ ಹರಿಪ್ರಸಾದ್ ಅವರನ್ನು ಕಡೆಗಣಿಸುತ್ತಿರುವುದು ಕಾಣುತ್ತಿದೆ. ಬಿ.ಕೆ. ಹರಿಪ್ರಸಾದ್ ಅವರಿಗೆ ತಕ್ಷಣ ಸೂಕ್ತ ಸ್ಥಾನಮಾನ ನೀಡಬೇಕು ತಪ್ಪಿದ್ದಲ್ಲಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ತಕ್ಕ ಬೆಲೆ ತೆರಲಿದೆ ಎಂದು ಎಚ್ಚರಿಕೆ ನೀಡಿದರು.
ಬಿ.ಕೆ. ಹರಿಪ್ರಸಾದ್ ಅವರ ಬೆನ್ನೆಲುಬಾಗಿ ಬಿಲ್ಲವ ಸಮಾಜ ನಿಲ್ಲಲಿದೆ. ಅವರಿಗೆ ಸೂಕ್ತ ಸ್ಥಾನ ಮಾನ ನೀಡಿಬೇಕು, ಇಲ್ಲದೇ ಹೋದಲ್ಲಿ ಸಮುದಾಯ ಬೀದಿಗಿಳಿಯುವುದು ನಿಶ್ವಿತ ಎಂದ ಅವರು ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ 250 ಕೋಟಿ ರೂಪಾಯಿ ಅನುದಾನ ಒದಗಿಸಬೇಕು, ಅಧಕ್ಷ ಹಾಗೂ ಪದಾಧಿಕಾರಿಗಳ ನೇಮಕ ಮಾಡಬೇಕು, ವಿಧಾನಸೌಧದ ಮುಂಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಸ್ಥಾಪಿಸಬೇಕು. ಬಿಲ್ಲವರು ಹಾಗೂ ಈಡಿಗರ ಕುಲ ಕುಸಬಾಗಿರುವ ನೀರಾ ಹಾಗೂ ಶೇಂದಿ ಇಳಿಸುವ ಕಾಯಕಕ್ಕೆ ಸರಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು, ಬಿಲ್ಲವರ ಕುಲಶಾಸ್ತ್ರೀಯ ಅಧ್ಯಯನವನ್ನು ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣ ಗುರು ಅಧ್ಯಯನ ಪೀಠಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಮಂಗಳೂರಿನಲ್ಲಿ ಒಂಭತ್ತು ಲಕ್ಷ, ಉಡುಪಿಯಲ್ಲಿ ಮೂರು ಲಕ್ಷ , ಕಾರವಾರದಲ್ಲಿ 5 ಲಕ್ಷ, ಶಿವಮೊಗ್ಗ ಜಿಲ್ಲೆಯಲ್ಲಿ 5 ಲಕ್ಷ ಬಿಲ್ಲವರು, ಈಡಿಗರು, ನಾಮಧಾರಿಗಳು, ದೀವರು ಇದ್ದರೂ ಇಲ್ಲಿರುವ 22 ಮತ ಕ್ಷೇತ್ರಗಳಲ್ಲಿ ಬಹುಸಂಖ್ಯೆಯಲ್ಲಿರುವ ಬಿಲ್ಲವರನ್ನು ಕಡೆಗಣಿಸಲಾಗಿದೆ. ಇದೇ ರೀತಿ ಕಡೆಗಣಿಸಿದ್ದಲ್ಲಿ ಸ್ವತಂತ್ರ ಪಕ್ಷ ಸ್ಥಾಪಿಸಲು ಬಿಲ್ಲವ ಸಮುದಾಯ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಜಿಲ್ಲಾ ಗೌರವಾಧ್ಯಕ್ಷ ಸಂಜೀವ ಪೂಜಾರಿ, ಜಿಲ್ಲಾಧ್ಯಕ್ಷ ಸುರೇಶ್ಚಂದ್ರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಟಿ. ಶಂಕರ್ ಸುವರ್ಣ, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ, ಸತೀಶ್ ಉಪಸ್ಥಿತರಿದ್ದರು.