ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ ಸನ್ಮಾನ

ಮಂಗಳೂರು: ಇಂಟರ್ ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್ (ಐಎಸಿ) ವತಿಯಿಂದ ಅತ್ಯುತ್ತಮ ಸಾಂಸ್ಥಿಕ ನಾಯಕತ್ವಕ್ಕಾಗಿ ದುಬೈಯಲ್ಲಿ ಅಂತರ್‌ರಾಷ್ಟ್ರೀಯ ಸಾಧಕ ಪ್ರಶಸ್ತಿ ಪಡೆದ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ದುಬೈಯಲ್ಲಿ ಸನ್ಮಾನಿಸಲಾಯಿತು.
ಗಲ್ಫ್ ಕನ್ನಡಿಗರ ಒಕ್ಕೂಟ, ಕನ್ನಡಿಗರ ಕನ್ನಡ ಕೂಟ ದುಬೈ ,ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್ , ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈ , ಶಿರೂರು ಅಸೋಸಿಯೇಶನ್ ದುಬೈ , ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ ಯುಎಇ ಇವರ ಸಂಯುಕ್ತ ಆಶ್ರಯದಲ್ಲಿ ದುಬೈ ರೀಜೆಂಟ್ ಪ್ಯಾಲೇಶ್ ಹೋಟೆಲ್ ಸಭಾಂಗಣದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಅಭಿನಂದನಾ ಸಮಾರಂಭ ನಡೆಯಿತು.
ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜನಪರ ಯೋಜನೆಗಳ ಮೂಲಕ ಎಸ್ ಸಿಡಿಸಿಸಿ ಬ್ಯಾಂಕ್ ನ್ನು ಉನ್ನತ ಮಟ್ಟಕ್ಕೇರಿಸಿದ ರಾಜೇಂದ್ರ ಕುಮಾರ್ ಅವರ ಸಾಧನೆಯನ್ನು ಗುರುತಿಸಿ ಸಮಸ್ತ ಗಲ್ಫ್ ಕನ್ನಡಿಗರ ವತಿಯಿಂದ ಅಭಿಮಾನಪೂರ್ವಕ ಈ ಸನ್ಮಾನ ಕಾರ್ಯಕ್ರಮ ನಡೆಯಿತು.
ಅಭಿಮಾನಕ್ಕೆ ಚಿರಋಣಿ ಎಂದ ಎಂಎನ್ ಆರ್ : ಗಲ್ಫ್ ಕನ್ನಡಿಗರು ಕನ್ನಡಿಗನೆಂಬ ಅಭಿಮಾನದಲ್ಲಿ ನೀಡಿರುವ ಸನ್ಮಾನವನ್ನು ಸ್ವೀಕರಿಸಿದ ರಾಜೇಂದ್ರ ಕುಮಾರ್ , ಗಲ್ಫ್ ಕನ್ನಡಿಗರ ಅಭಿಮಾನಕ್ಕೆ ಚಿರಋಣಿ ಎಂದರು. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಅವಿಸ್ಕಾರಗಳೊಂದಿಗೆ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಬ್ಯಾಂಕ್ ಅಧ್ಯಕ್ಷನಾಗಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಮಾತ್ರವಲ್ಲ ಇನ್ನೂ ಹೆಚ್ಚಿನ ಶಾಖೆಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯುವ ಯೋಜನೆ ಇದೆ ಎಂದರು.
ಈ ಸಂದರ್ಭದಲ್ಲಿ ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾದ ಇಕ್ಭಾಲ್ ಇಬ್ರಾಹಿಂ, ನಮ್ಮ ಕನ್ನಡಿಗರು ದುಬೈ ಇದರ ಅಧ್ಯಕ್ಷರಾದ ಸದಾನಂದ ದಾಸ್ , ನಮ್ಮ ಕುಂದಾಪ್ರ ಕನ್ನಡ ಬಳಗದಿಂದ ದಿನೇಶ್ ದೇವಾಡಿಗ, ಸುಧಾಕರ್ ಪೂಜಾರಿ ಹಾಗೂ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು.