ಉಡುಪಿ: ಕಾರು ಚಾಲಕನಿಗೆ ಹಲ್ಲೆ ಪ್ರಕರಣ; ನಾಲ್ವರು ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ
ಉಡುಪಿ, ಜು.12: ಆರು ವರ್ಷಗಳ ಹಿಂದೆ ನಡೆದ ಕಾರು ಚಾಲಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ಆರೋಪಿಗೆ ಎರಡನೇ ಹೆಚ್ಚುವರಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಇಂದು ಆದೇಶ ನೀಡಿದೆ.
ಉಡುಪಿ ಚಿಟ್ಪಾಡಿಯ ಯೋಗೀಶ್ ಪೂಜಾರಿ(43), ಕೊಡವೂರು ಮಾಧವ ನಗರದ ಸುಧಾಕರ್(42), ಉದ್ಯಾವರದ ವಸಂತ(52), ಎಲ್ಲೂರಿನ ಕಿರಣ್ (34) ಶಿಕ್ಷೆಗೆ ಗುರಿಯಾದ ಆರೋಪಿಗಳು. ಇವರೆಲ್ಲರು ಕಾರು ಚಾಲಕರಾಗಿ ದುಡಿಯುತ್ತಿದ್ದರು.
ಶಿರ್ವ ನಿವಾಸಿ ರಾಜೇಶ್ ಶೆಟ್ಟಿಗಾರ್(40) ಎಂಬವರು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಬಳಿ ಕಾರು ಬಾಡಿಗೆ ನಡೆಸುತ್ತಿದ್ದರು. ಇವರು ಬ್ಯಾಜ್ ಇಲ್ಲದ ಯೋಗೀಶ್ ಪೂಜಾರಿ ಕಾರು ನಿಲ್ದಾಣದಲ್ಲಿ ಕಾರು ನಿಲ್ಲಿಸುವ ಬಗ್ಗೆ ಅವರ ಸಂಘಕ್ಕೆ ದೂರು ನೀಡಿದ್ದನು. ಇದೇ ಧ್ವೇಷದಲ್ಲಿ ಯೋಗೀಶ್ ಪೂಜಾರಿ ಇತರರೊಂದಿಗೆ 2017ರ ಮಾ.7ರಂದು ರಾಜೇಶ್ ಶೆಟ್ಟಿಗಾರ್ ವಾಸ ಮಾಡಿ ಕೊಂಡಿದ್ದ ಕುಂಜಿಬೆಟ್ಟು ಕಾನೂನು ಕಾಲೇಜು ಸಮೀಪದ ರೂಮಿಗೆ ಹೋಗಿ ಕೊಲೆಗೆ ಯತ್ನಿಸಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಎಸ್ಸೈ ಅನಂತಪದ್ಮನಾಭ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು, ಕಲಂ 307 ಅಡಿ 6 ತಿಂಗಳ ಸಾದಾ ಸಜೆ, 326ರಡಿ 3ವರ್ಷ ಗಳ ಜೈಲು ಶಿಕ್ಷೆ ಮತ್ತು ತಲಾ 20ಸಾವಿರ ರೂ. ದಂಡ, 504ರಡಿ 6 ತಿಂಗಳ ಹಾಗೂ 506ರಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದಿಸಿದ್ದರು.