ಉಡುಪಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ವಾಸುದೇವ ಮುದೂರು, ಗೌರಿ ಕೆಂಜೂರು ಆಯ್ಕೆ
ದಲಿತ ದೌರ್ಜನ್ಯ ತಡೆ ಕಾಯ್ದೆಯ ಪ್ರಕರಣ
ಉಡುಪಿ, ಜೂ.23: ಉಡುಪಿ ಜಿಲ್ಲಾಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನು ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ. ಅಧ್ಯಕ್ಷತೆಯಲ್ಲಿ ಪುನರ್ ರಚಿಸಿದೆ.
ನೂತನವಾಗಿ ರಚನೆಯಾದ ಸಮಿತಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಹಾಗು ಕರ್ನಾಟಕ ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರು ಆದ ವಾಸುದೇವ ಮುದೂರು, ಕೊರಗ ಸಂಘದ ಗೌರಿ ಕೆಂಜೂರು ಸ್ಥಾನ ಪಡೆದಿದ್ದಾರೆ. ಅಲ್ಲದೇ ದಲಿತ ಸಮುದಾಯದ ಉದಯ ಪಂಬದ, ವಕೀಲರಾದ ಮಂಜುನಾಥ ವಿ., ಪರಿಶಿಷ್ಟ ಪಂಗಡದ ಬಾಲಗಂಗಾಧರ ಬಿ. ಗೌಡ, ಸರಕಾರೇತರ ಸಂಘಟನೆಯ (ಎನ್ಜಿಓ) ಉದಯ ಕುಮಾರ್ ಇವರು ಸಮಿತಿಗೆ ನೂತನವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಕಾರ್ಯದರ್ಶಿಗಳಾಗಿರುತ್ತಾರೆ. ಸಮಿತಿಯಲ್ಲಿ ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯರು, ಉಡುಪಿ, ಕಾಪು, ಕಾರ್ಕಳ, ಬೈಂದೂರು, ಕುಂದಾಪುರ ಕ್ಷೇತ್ರದ ಶಾಸಕರು, ವಿಧಾನಪರಿಷತ್ ಸದಸ್ಯರು, ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ಸರಕಾರಿ ಅಭಿಯೋಜಕರು, ಸರಕಾರಿ ಅಭಿಯೋಜಕರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರ, ಜಿಲ್ಲಾ ವ್ಯವಸ್ಥಾಪಕರು ಡಾ. ಬಿ ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ, ಯೋಜನಾ ಸಮನ್ವಯಾಧಿಕಾರಿಗಳು ಐಟಿಡಿಪಿ ಉಡುಪಿ ಜಿಲ್ಲೆ, ಉಡುಪಿ ತಾಪಂನ ಕಾರ್ಯ ನಿರ್ವಹಕಾಧಿಕಾರಿಗಳು ಸದಸ್ಯರುಗಳಾಗಿರುತ್ತಾರೆ.
ಸಮಿತಿಯು ಮೂರು ವರ್ಷಗಳ ಕಾಲ ಕಾರ್ಯಾಚರಿಸಲಿದ್ದು, ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿಯ ಪೂರ್ಣ ಪ್ರಮಾಣದ ಅಧಿಕಾರವನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.