ಉಡುಪಿ: ಆಯುಷ್ ವೈದ್ಯರಿಂದ ‘ಕುಟುಂಬೋತ್ಸವ’
ಉಡುಪಿ, ಜು.1: ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಜು.2ರಂದು ನಗರದ ಮಣಿಪಾಲ ಇನ್ ಹೊಟೇಲಿನ ಸಭಾಂಗಣದಲ್ಲಿ ‘ಕುಟುಂಬೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎನ್.ಟಿ.ಅಂಚನ್ ಹೇಳಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಆಯುಷ್ ವೈದ್ಯರು ಹಾಗೂ ಕುಟುಂಬದ ಸದಸ್ಯರಿಗೆ ವಿವಿಧ ವಿನೋದಾವಲಸಿ ಹಾಗೂ ಮನೋರಂಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ವೈದ್ಯ ಸಂಘಟನೆಯು ವೈದ್ಯಕೀಯ ಸೇವೆಯಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯ ವೈದ್ಯರುಗಳಿಗೆ ಸನ್ಮಾನ, ಎಎಫ್‌ಐ ವತಿಯಿಂದ ‘ವೈದ್ಯಸಿರಿ ಪುರಸ್ಕಾರ-2023’ ನೀಡಿ ಗೌರವಿಸಲಾಗುತ್ತದೆ. ಈ ಬಾರಿಯ ಉಡುಪಿಯ ಡಾ.ಲಕ್ಷ್ಮೀನಾರಾಯಮ ಉಪಾಧ್ಯಾಯ, ಕುಂದಾಪುರದ ಡಾ.ಸತೀಶ್ ಭಟ್ ಹಾಗೂ ಕಾರ್ಕಳದ ಡಾ.ಅಜಿತ್ ಪ್ರಕಾಶ್‌ರನ್ನು ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ರವಿವಾರ ಸಂಜೆ 6 ಗಂಟೆಗೆ ಖ್ಯಾತ ತುಳು ಚಲನಚಿತ್ರ ನಟ ಭೋಜರಾಜ ವಾಮಂಜೂರು ಉದ್ಘಾಟಿಸಲಿದ್ದಾರೆ. ಜೆಸಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಸನ್ಮಾನವನ್ನು ನಡೆಸಿ ಕೊಡಲಿದ್ದಾರೆ. ಡಾ.ನವೀನ್ ಬಲ್ಲಾಳ್, ಡಾ.ರವೀಂದ್ರ ಶೆಟ್ಟಿ, ಡಾ.ದೀಪಾ ನಾಯಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಎಎಫ್‌ಐ ಕಾರ್ಯದರ್ಶಿ ಡಾ.ಸತೀಶ್ ರಾವ್, ಉಡುಪಿ ತಾಲೂಕು ಕಾರ್ಯದರ್ಶಿ ಡಾ.ಸಂದೀಪ್ ಸನಿಲ್, ಸಂಘಟನಾ ಕಾರ್ಯದರ್ಶಿ ಡಾ.ದೀಪಕ್ ಕಡಿಯಾಳಿ ಉಪಸ್ಥಿತರಿದ್ದರು.