ಉಡುಪಿ: ಜಿಲ್ಲೆಯಾದ್ಯಂತ ಬಿರುಸು ಪಡೆಯುತ್ತಿರುವ ವರುಣ
ನಾಲ್ಕು ಗ್ರಾಮಗಳಲ್ಲಿ 125ಮಿ.ಮೀ.ಗೂ ಅಧಿಕ ಮಳೆ
ಉಡುಪಿ, ಜು.3: ಮುಂಗಾರು ಪೂರ್ವ ಹಾಗೂ ಪ್ರಾರಂಭಿಕ ಹಂತದಲ್ಲಿ ಕೈಕೊಟ್ಟು ಜನರಲ್ಲಿ ಹಾಗೂ ರೈತರಲ್ಲಿ ಆತಂಕ ಮೂಡಿಸಿದ್ದ ಮುಂಗಾರು ಮಳೆ, ಮಳೆಗಾಲದ ಎರಡನೇ ತಿಂಗಳು ಪ್ರವೇಶಿಸುತಿದ್ದಂತೆ ಬಿರುಸು ಪಡೆದಿದೆ. ರವಿವಾರ ಹಾಗೂ ಸೋಮವಾರ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 78.3ಮಿ.ಮೀ. ಮಳೆ ಸುರಿದಿದೆ. ಇದೇ ಅವಧಿಯಲ್ಲಿ ಜಿಲ್ಲೆಯ ನಾಲ್ಕು ಗ್ರಾಮಗಳಲ್ಲಿ 125ಮಿ.ಮೀ.ಗೂ ಅಧಿಕ ಮಳೆ ಸುರಿದಿರುವ ಬಗ್ಗೆ ವರದಿಗಳು ಬಂದಿವೆ. ಕಾರ್ಕಳ ತಾಲೂಕಿನ ರೆಂಜಾಳ, ಬ್ರಹ್ಮಾವರ ತಾಲೂಕಿನ ಹಂದಾಡಿ ಹಾಗೂ ವಡ್ಡರ್ಸೆ ಮತ್ತು ಕುಂದಾಪುರ ತಾಲೂಕಿನ ಹಕ್ಲಾಡಿಗಳಲ್ಲಿ 125ಮಿ.ಮೀಗೂ ಅಧಿಕ ಮಳೆ ಸುರಿದಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಹವಾಮಾನ ವಿಭಾಗ ತಿಳಿಸಿದೆ.
ಜಿಲ್ಲೆಯಲ್ಲಿ ಬ್ರಹ್ಮಾವರದಲ್ಲಿ ಗರಿಷ್ಠ 100.1ಮಿ.ಮೀ. ಮಳೆ ಸುರಿದರೆ, ಕುಂದಾಪುರ ತಾಲೂಕಿನಲ್ಲಿ ಕನಿಷ್ಠ 64.5ಮಿ.ಮೀ. ಮಳೆಯಾಗಿದೆ. ಉಳಿದಂತೆ ಉಡುಪಿಯಲ್ಲಿ 99.1, ಕಾಪುವಿನಲ್ಲಿ 79.0, ಹೆಬ್ರಿಯಲ್ಲಿ 77.9, ಕಾರ್ಕಳದಲ್ಲಿ 76.4 ಹಾಗೂ ಬೈಂದೂರಿನಲ್ಲಿ 76.2ಮಿ.ಮೀ. ಮಳೆಯಾದ ಬಗ್ಗೆ ವರದಿ ಬಂದಿದೆ.
ಭಾರೀ ಗಾಳಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು ಐದು ಮನೆಗಳಿಗೆ ಹಾನಿಯಾದ ಬಗ್ಗೆಯೂ ಮಾಹಿತಿ ಬಂದಿದೆ. ಕುಂದಾಪುರ ತಾಲೂಕಿನ ಅಜ್ರಿ ಗ್ರಾಮದ ಬಸವ ಹಾಂಡ ಎಂಬವರ ಮನೆಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು ಒಂದು ಲಕ್ಷ ರೂ.ನಷ್ಟು ನಷ್ಟವಾದ ಬಗ್ಗೆ ಅಂದಾಜಿಸ ಲಾಗಿದೆ.
ಉಳಿದಂತೆ ಬ್ರಹ್ಮಾವರ ತಾಲೂಕು ಐರೋಡಿ ಗ್ರಾಮದ ಅಕ್ಕಯ್ಯ ಪೂಜಾರ್ತಿ ಎಂಬವರ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿ 25 ಸಾವಿರ ರೂ., ಕಾರ್ಕಳ ತಾಲೂಕು ಕಾಂತಾವರ ಗ್ರಾಮದ ಲೋಕಯ್ಯ ಪೂಜಾರಿ ಎಂಬವರ ವಾಸ್ತವ್ಯದ ಮನೆ ಮೇಲೆ ಮರಬಿದ್ದು ಭಾಗಶ: ಹಾನಿಯಾಗಿದ್ದು 30,000ರೂ.ಗಳಿಗೂ ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕು ಪಾದೂರಿನ ಜಲಜ ಶೆಡ್ತಿ ಇವ ಮನೆಯೂ ಭಾಗಶ: ಹಾನಿಗೊಂಡು 25,000ರೂ. ನಷ್ಟವಾದರೆ, ಕುಂದಾಪುರ ತಾಲೂಕಿನ ದೇವಲ್ಕುಂದದ ತಿಮ್ಮ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ಸುಮಾರು 25,000ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆಯಾಗಿ ಆರೆಂಜ್ ಅಲರ್ಟ್‌ನ್ನು ಹವಾಮಾನ ಇಲಾಖೆ ನೀಡಿದೆ. ಗುರುವಾರಕ್ಕೆ ಯಲ್ಲೋ ಅಲರ್ಟ್‌ನ್ನೂ ಶುಕ್ರವಾರ ಮತ್ತೆ ಆರೆಂಜ್ ಅಲರ್ಟ್‌ನ್ನು ನೀಡಲಾಗಿದೆ.ಜಿಲ್ಲೆಯಲ್ಲಿ ದಿನದ ಗರಿಷ್ಠ ಉಷ್ಣಾಂಶ 30.4ಡಿಗ್ರಿ ಸೆ. ಆಗಿದ್ದರೆ, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆ. ಇತ್ತು.
ಮುನ್ಸೂಚನೆ: ಮುಂದಿನ 24 ಗಂಟೆಗಳ್ಲಿ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.ಗಂಟೆಗೆ 40ರಿಂದ 45 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದ್ದು, ಸಮುದ್ರದಲ್ಲಿ 3.5ಮೀ. ಎತ್ತರ ಅಲೆಗಳು ಏಳುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.