ಉಡುಪಿ: ರಾಜ್ಯ ಕರಾವಳಿಯಲ್ಲಿ ಜು.5ರಂದು ರೆಡ್ ಅಲರ್ಟ್ ಘೋಷಣೆ
ಉಡುಪಿ, ಜು.4: ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿಗೆ ರೆಡ್ ಅಲರ್ಟ್‌ನ್ನು ಘೋಷಿಸಿದೆ. ಕರಾವಳಿಯ ಹೆಚ್ಚಿನ ಭಾಗಗಳಲ್ಲಿ ನಾಳೆ 115.6ಮಿ.ಮೀ.ನಿಂದ 204.4ಮಿ.ಮೀ. ಮಳೆ ಬೀಳಲಿದ್ದು, ಕೆಲವು ಕಡೆಗಳಲ್ಲಿ ಅತೀ ಹೆಚ್ಚು ಅಂದರೆ 204.4 (20ಸೆ.ಮಿ.) ಮಿ.ಮೀ.ಗಳಿಂತಲೂ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಅನಂತರದ ದಿನಗಳಲ್ಲಿ ಗುರುವಾರ ಎಲ್ಲೋ ಅಲರ್ಟ್‌ನ್ನೂ ಶುಕ್ರವಾರ ಆರೆಂಜ್ ಅಲರ್ಟ್‌ನ್ನೂ ಹವಾಮಾನ ಇಲಾಖೆ ರಾಜ್ಯ ಕರಾವಳಿಗೆ ನೀಡಿದೆ. ಈ ಸಮಯದಲ್ಲಿ ಜಿಲ್ಲೆಯಲ್ಲಿ ಬಿರುಗಾಳಿಯಿಂದ ಕೂಡಿದ ಮಳೆ ಸುರಿಯುವ ಸಾಧ್ಯತೆ ಇದೆ. ಗಾಳಿಯು ಗಂಟೆಗೆ 45ರಿಂದ 55ಕಿ.ಮೀ. ವೇಗದಲ್ಲಿ ಬೀಸಲಿದೆ. ಇದರಿಂದ ಸಮುದ್ರ ಪ್ರಕ್ಷುಬ್ಧವಾಗಿದ್ದು, ಮಂಗಳೂರಿನಿಂದ ಕಾರವಾರದವರೆಗೆ 3.5ಮೀ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಹೀಗಾಗಿ ಜು.8ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 70.4ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಬೈಂದೂರಿನಲ್ಲಿ 91.6ಮಿ.ಮೀ., ಕಾಪುವಿನಲ್ಲಿ 86.5ಮಿ.ಮೀ., ಹೆಬ್ರಿಯಲ್ಲಿ 73.0, ಉಡುಪಿಯಲ್ಲಿ 69.7, ಕುಂದಾಪುರದಲ್ಲಿ 64.0, ಬ್ರಹ್ಮಾವರದಲ್ಲಿ 61.8ಮಿ.ಮೀ. ಹಾಗೂ ಕಾರ್ಕಳದಲ್ಲಿ 60.5ಮಿ.ಮೀ. ಮಳೆಯಾಗಿದೆ.
ಭಾರೀ ಮಳೆಯ ಕಾರಣ ಕಾಪು ತಾಲೂಕು ಪಾದೂರು ಗ್ರಾಮದ ಗುಲಾಬಿ (41) ಎಂಬ ಮಹಿಳೆ ತನ್ನ ಮನೆಯ ಆವರಣವಿಲ್ಲದ ಬಾವಿಯಲ್ಲಿ ನೀರು ಸೇದುವಾಗ ಬಾವಿಯ ಮಣ್ಣು ಕುಸಿದು, ಮಣ್ಣಿನೊಂದಿಗೆ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ಕಾಪು ತಹಶೀಲ್ದಾರ್ ವರದಿ ನೀಡಿದ್ದಾರೆ.
ನಾಲ್ಕು ಮನೆಗಳಿಗೆ ಹಾನಿ: ಉಳಿದಂತೆ ಜಿಲ್ಲೆಯಲ್ಲಿ ನಾಲ್ಕು ಮನೆಗಳು ಭಾರೀ ಗಾಳಿ-ಮಳೆಗೆ ಹಾನಿಗೊಂಡಿದ್ದು, ಲಕ್ಷಾಂತರ ರೂ.ಮೌಲ್ಯದ ಸೊತ್ತು ಹಾನಿಗೊಳಗಾಗಿವೆ. ಕುಂದಾಪುರ ತಾಲೂಕು ಹಳ್ನಾಡು ಗ್ರಾಮದ ಗಣಪಯ್ಯ ಶೆಟ್ಟಿ ಎಂಬವರ ಮನೆ ಭಾಗಶ: ಹಾನಿಗೊಂಡಿದ್ದು 20ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ರಾಧಾಕೃಷ್ಣ ಎಂಬವರ ವಾಸದ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು 30ಸಾವಿರ ರೂ. ಹಾಗೂ ಬನ್ನಾಡಿ ಗ್ರಾಮದ ಕೂಸು ಪೂಜಾರಿ ಎಂಬವರ ಮನೆಯೂ ಹಾನಿಗೊಂಡಿದ್ದು 70,000ರೂ.ನಷ್ಟವಾಗಿದೆ. ಇನ್ನು ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ವಸಂತಿ ಎಂಬವರ ಮನೆ ಸಹ ಗಾಳಿ-ಮಳೆಗೆ ಹಾನಿಗೊಂಡಿದ್ದು 50,000ರೂ. ನಷ್ಟದ ಅಂದಾಜು ಮಾಡಲಾಗಿದೆ.