ಉಡುಪಿ: ನವೀಕೃತ ಶ್ರೀಕೃಷ್ಣ ಛತ್ರ ಕೃಷ್ಣಾರ್ಪಣ
ಉಡುಪಿ : ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ವಿವಿಧ ಸಂಸ್ಥೆ ಹಾಗೂ ಭಕ್ತರ ನೆರವಿನೊಂದಿಗೆ ಕೃಷ್ಣಮಠದ ರಾಜಾಂಗಣಕ್ಕೆ ಹೊಂದಿಕೊಂಡು ಇರುವ ನವೀಕೃತ ಶ್ರೀಕೃಷ್ಣ ಛತ್ರವನ್ನು ಇತರೆ ಮಠಾಧೀಶರ ಉಪಸ್ಥಿತಿಯಲ್ಲಿ ಶ್ರೀಕೃಷ್ಣನಿಗೆ ಸಮರ್ಪಿಸಿದರು.
ಈ ಛತ್ರ ೧೯೬೬ರಲ್ಲಿ ಆಗಿನ ಶೀರೂರು ಮಠಾಧೀಶರಿಂದ ನಿರ್ಮಿಸ ಲ್ಪಟ್ಟಿದ್ದು, ಪ್ರಸ್ತುತ ಶಿಥಿಲಗೊಂಡಿತ್ತು. ಇದೀಗ ಸಮಾರು ೩.೫ ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ನವೀಕರಿಸಲಾಗಿದೆ.
ಇದರ ಕೆಳ ಅಂತಸ್ತಿನಲ್ಲಿ ಅತೀ ಗಣ್ಯರಿಗೆ ವಿಶ್ರಾಂತಿಗೆ ಒಂದು ಸುಸಜ್ಜಿತ ಕೋಣೆ, ಕಲಾವಿದರಿಗೆ ವಿಶಾಲವಾದ ಗ್ರೀನ್‌ರೂಮ್, ಪತ್ರಿಕೆ/ಮಾಧ್ಯಮ ದವರಿಗೆ ವಿಶ್ರಾಂತಿ ಕೋಣೆ, ಮೇಲಿನ ಎರಡು ಮಹಡಿಗಳಲ್ಲಿ ಮಠದ ಸಿಬಂದಿಗಳಿಗೆ ೨೮ ಕೋಣೆಗಳೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಸ್ನಾನಗೃಹ ಶೌಚಗೃಹಗಳನ್ನು ನಿರ್ಮಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಯೂರು, ಅದಮಾರು ಕಿರಿಯ, ಶೀರೂರು ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು. ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದ ಇಂಜಿನಿಯರ್ ಯುಕೆ ರಾಘವೇಂದ್ರ ರಾವ್ ಸೇರಿದಂತೆ ಇತರನ್ನು ಶ್ರೀಪಾದರು ಸಂಮಾನಿಸಿದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿ, ರಾಘವೇಂದ್ರ ರಾವ್ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಬಿ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.
ಮಠದ ದಿವಾನ ವರದರಾಜ ಭಟ್, ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯ, ರವಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.