ಉಡುಪಿ: ಗಾಳಿ-ಮಳೆಗೆ ನಾಲ್ಕು ಮನೆ, ಕೊಟ್ಟಿಗೆಗೆ ಹಾನಿ
ಉಡುಪಿ, ಜು.15: ಜಿಲ್ಲೆಯಲ್ಲಿ ಇಂದೂ ಸಾಧಾರಣ ಮಳೆಯಾಗುತಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ನಾಲ್ಕು ಮನೆಗಳಿಗೆ ಹಾಗೂ ಒಂದು ಜಾನುವಾರು ಕೊಟ್ಟಿಗೆಗೆ ಗಾಳಿ-ಮಳೆಯಿಂದ ಹಾನಿಯಾಗಿದ್ದು ಒಟ್ಟು 1.25 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಕಾಪು ತಾಲೂಕಿನ ಕುತ್ಯಾರು ಗ್ರಾಮದ ಸಂದೀಪ್ ಆಚಾರ್ಯರ ಮನೆ ಭಾಗಶ: ಹಾನಿಯಾಗಿ 30,000ರೂ., ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಶಿವಪ್ಪ ಪೂಜಾರಿ ಅವರ ಮನೆ ಮೇಲೆ ಮರಬಿದ್ದು 15 ಸಾವಿರ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ವನಜ ಎಂಬವರ ಮನೆ ಗಾಳಿ-ಮಳೆಯಿಂದ ಹಾನಿಗೊಂಡು 50,000ರೂ. ಹಾಗೂ ಕೆಂಜೂರು ಗ್ರಾಮದ ಶ್ಯಾಮರಾಯ ಆಚಾರ್ಯರ ಮನೆಗೆ 10ಸಾವಿರ ರೂ.ನಷ್ಟವಾಗಿದೆ. ಉಪ್ಪೂರು ಗ್ರಾಮದ ಕ್ಲಿಫರ್ಡ್ ಲೂವಿಸ್‌ರ ಮನೆಗೆ ತಾಗಿ ಇರುವ ಕೊಟ್ಟಿಗೆ ಕುಸಿದಿದ್ದು 15ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ರವರೆಗೆ 24 ಗಂಟೆಗಳ ಅವಧಿಯಲ್ಲಿ ಸರಾಸರಿ 32.8ಮಿ.ಮೀ. ಮಳೆಯಾಗಿದೆ. ಕಾಪು ಮತ್ತು ಕುಂದಾಪುರಗಳಲ್ಲಿ ತಲಾ 44.4ಮಿ.ಮೀ., ಬ್ರಹ್ಮಾವರದಲ್ಲಿ 36.0, ಹೆಬ್ರಿಯಲ್ಲಿ 35.4, ಉಡುಪಿ ಮತ್ತು ಕಾರ್ಕಳದಲ್ಲಿ ತಲಾ 24.5ಮಿ.ಮೀ. ಹಾಗೂ ಬೈಂದೂರಿನಲ್ಲಿ 21.6ಮಿ.ಮೀ. ಮಳೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಮುಂದಿನ ಐದುದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದಿನ ಬಜೆ ಡ್ಯಾಂನ ನೀರಿನ ಮಟ್ಟ 5.80ಮೀ. ಆಗಿದ್ದರೆ, ಕಾರ್ಕಳ ಮುಂಡ್ಲಿಯ ನೀರಿನ ಮಟ್ಟ 4.26ಮೀ. ಆಗಿದೆ ಎಂದು ವರದಿ ತಿಳಿಸಿದೆ.