ವೆಂಟನಾ ಫೌಂಡೇಷನ್‌ನಿಂದ 12 ಕನ್ನಡ ಶಾಲೆಗಳಿಗೆ ವಿವಿಧ ಸೌಲಭ್ಯ
ಉಡುಪಿ, ಜು.1: ರೋಬೊಸಾಫ್ಟ್ ಟೆಕ್ನಾಲಜೀಸ್ ಹಾಗೂ 99 ಗೇಮ್ಸ್‌ನ ಸ್ಥಾಪಕ ರೋಹಿತ್ ಭಟ್ ಅವರು ಸಮಾನ ಮನಸ್ಕ ಸಹೋದ್ಯೋಗಿಗ ಳೊಂದಿಗೆ 2022ರಲ್ಲಿ ಪ್ರಾರಂಭಿಸಿದ ‘ವೆಂಟನಾ ಫೌಂಡೇಷನ್’ ಮೂಲಕ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವಾ ಕಾರ್ಯಗಳನ್ನು ಮಾಡುತಿದೆ ಎಂದು ಫೌಂಡೇಷನ್‌ನ ಟ್ರಸ್ಟಿ ಶಿಲ್ಪಾ ಭಟ್ ತಿಳಿಸಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿಲ್ಪಾ ಭಟ್, ಫೌಂಡೇಷನ್ ಕಳೆದ 18 ತಿಂಗಳಲ್ಲಿ ಸುಮಾರು 12 ಸರಕಾರಿ ಹಾಗೂ ಅನುದಾನಿತ ಕನ್ನಡ ಶಾಲೆಗಳ ಎಲ್ಲಾ ಮಕ್ಕಳಿಗೆ ಬೇಕಾದ ನೋಟ್ ಪುಸ್ತಕ, ಶಾಲಾ ಬ್ಯಾಗ್ ಹಾಗೂ ಇತರ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದೆ. ಇದರೊಂದಿಗೆ ಶಾಲೆಗಳಿಗೆ ಬೇಕಾದ ಲ್ಯಾಪ್‌ಟಾಪ್, ಪ್ರೊಜೆಕ್ಟರ್ ಹಾಗೂ ನೀರಿನ ಶುದ್ಧೀಕರಮ ಘಟಕಗಳನ್ನು ಕೂಡಾ ನೀಡಿದೆ ಎಂದರು.
ವೆಂಟನಾ ಫೌಂಡೇಷನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಜಿಲ್ಲೆಯ ಪ್ರಕೃತಿ ಸಂರಕ್ಷಣೆ, ಸಂಸ್ಕೃತಿ, ಸಮುದಾಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಒಲವನ್ನು ಹೊಂದಿದೆ. ಈಗಾಗಲೇ ಸಂಸ್ಥೆ ಕಳೆದ 18 ತಿಂಗಳಲ್ಲಿ 60 ಲಕ್ಷರೂ.ಗಳಿಗೂ ಅಧಿಕ ಮೊತ್ತವನ್ನು ವಿವಿಧ ಸೇವಾ ಕಾರ್ಯಗಳಿಗೆ ವ್ಯಯಿಸಿದೆ ಎಂದು ಶಿಲ್ಪಾ ಭಟ್ ವಿವರಿಸಿದರು.
ಜೂನ್ ಮೊದಲ ವಾರ ಶಾಲೆಗಳು ಪುನರಾರಂಭಗೊಳ್ಳುತ್ತಿರುವಾಗಲೇ ಬೋಧನಾ ಉಪಕರಣಗಳು, ನೋಟ್ ಪುಸ್ತಕಗಳು ಹಾಗೂ ಇತರ ಸಾಮಗ್ರಿ ಗಳನ್ನು ವಿತರಿಸಲಾಗಿದೆ. 12 ಸರಕಾರಿ ಹಾಗೂ ಅನುದಾನಿತ ಕನ್ನಡ ಶಾಲೆಗಳಿಗೆ ಇದುವರೆಗೆ 12 ಲಕ್ಷರೂ. ಮೌಲ್ಯದ ವಿವಿಧ ಸಾಮಗ್ರಿಗಳು ಹಾಗೂ ಅನುದಾನವನ್ನು ವಿತರಿಸಲಾಗಿದೆ ಎಂದರು.
ವೆಂಟನಾ ಫೌಂಡೇಷನ್ ಅಧ್ಯಕ್ಷ ರೋಹಿತ್ ಭಟ್ ಮಾತನಾಡಿ, ಸಂಸ್ಥೆ ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳನ್ನು ಹೆಚ್ಚು ಗಮನದಲ್ಲಿಟ್ಟು ತನ್ನ ಸೇವಾ ಕಾರ್ಯಗಳನ್ನು ಮಾಡುತ್ತಿದೆ.ಕನ್ನಡ ಶಾಲಾ ಮಕ್ಕಳಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಪುನರುಜ್ಜೀವನ, ಶಿಕ್ಷಣ ಹಾಗೂ ಸಮುದಾಯ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುವು ದಾಗಿ ತಿಳಿಸಿದ ಅವರು, ಭವಿಷ್ಯದಲ್ಲಿ ಡಿಜಿಟಲ್ ಜಗತ್ತಿಗೆ ಅವಕಾಶದ ಬಾಗಿಲು ತೆರೆಯುವಾಗ ನಾವು ಹಿಂದಿನದನ್ನು ಕಳೆದುಕೊಳ್ಳದಂತೆ ಎಚ್ಚರ ವಹಿಸುವುದು ವೆಂಟನಾ ಫೌಂಡೇಷನ್‌ನ ಮುಖ್ಯ ಗುರಿ ಎಂದರು.
ಫೌಂಡೇಷನ್‌ನ ಮತ್ತೊಬ್ಬ ಟ್ರಸ್ಟಿ ರವೀಂದ್ರ ಕೆ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.