ಜೂ.28: ದ.ಕ.ಜಿಲ್ಲೆಯಲ್ಲಿ ‘ಎಲ್ಲೋ ಅಲರ್ಟ್’ ಘೋಷಣೆ
ಮಂಗಳೂರು, ಜೂ.27: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಧಾರಾಕಾರ ಮಳೆಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆಯು ಜೂ.28ರಂದು ‘ಎಲ್ಲೋ ಅಲರ್ಟ್’ ಘೋಷಿಸಿದೆ.
ಮಂಗಳವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಉತ್ತಮ ಮಳೆಯಾಗಿವೆ. ಮಂಗಳೂರು ಅಲ್ಲದೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿದ್ದು, ನಗರದ ಪಾಂಡೇಶ್ವರ, ಕೆ.ಎಸ್.ರಾವ್ ರಸ್ತೆ, ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತ, ಬಂಟ್ಸ್‌ಹಾಸ್ಟೆಲ್, ಬಿಜೈ, ಕುಂಟಿಕಾನ, ಕೊಟ್ಟಾರ ಚೌಕಿ ಮತ್ತಿತರ ಕಡೆಗಳಲ್ಲಿ ಕೃತಕ ನೆರೆಯಾಗಿತ್ತು. ಅಲ್ಲದೆ ನಗರದಲ್ಲಿ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಮಧ್ಯಾಹ್ನದ ವೇಳೆ ಸ್ವಲ್ಪ ಬಿಸಿಲು ಕಾಣಿಸಿಕೊಂಡರೆ ಅಪರಾಹ್ನದ ಬಳಿಕ ಮೋಡ-ಬಿಸಿಲಿನಾಟ ಮುಂದುವರಿದಿತ್ತು.
ಸ್ಮಾರ್ಟ್ ಸಿಟಿಯ ಅಪೂರ್ಣ ಕಾಮಗಾರಿಯಿಂದ ಒಳಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದ ಕಾರಣ ರಸ್ತೆಯಲ್ಲೇ ನೀರು ಹರಿದ ಪರಿಣಾಮ ವಾಹನಿಗರು, ಪಾದಚಾರಿಗಳು ಪರದಾಡುವಂತಾಯಿತು.
ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನವರೆಗೆ ಪುತ್ತೂರು 9 ಮಿಮೀ, ಬೆಳ್ತಂಗಡಿ 8.7 ಮಿಮೀ, ಬಂಟ್ವಾಳ 4.7 ಮಿಮೀ, ಮಂಗಳೂರು 5 ಮಿಮೀ, ಸುಳ್ಯ 7.6 ಮಿಮೀ, ಮೂಡುಬಿದಿರೆ 3.3 ಮಿಮೀ, ಕಡಬ 6.4 ಮಿಮೀ ಮಳೆ ದಾಖಲಾಗಿದೆ. ದಿನದ ಸರಾಸರಿ ಮಳೆ 6.9 ಮಿಮೀ ಆಗಿದೆ.