ಯಶವಂತಪುರ-ಮುರುಡೇಶ್ವರ ವಿಶೇಷ ರೈಲು ಹಿಂತೆಗೆದುಕೊಳ್ಳುವ ಪ್ರಸ್ತಾಪಕ್ಕೆ ಸಿಪಿಐಎಂ ವಿರೋಧ
ಫೈಲ್ ಫೋಟೋ
ಉಡುಪಿ, ಜೂ.25: ಕಳೆದ ದೀಪಾವಳಿ ಸಂದರ್ಭದಲ್ಲಿ ಆರಂಭಗೊಂಡ ಯಶವಂತಪುರ-ಮುರುಡೇಶ್ವರ ವಿಶೇಷ ಎಕ್ಸ್ಪ್ರೆಸ್ ಓಡಾಟವನ್ನು ಮುಂದಿನ ವಾರದಿಂದ ನಿಲ್ಲಿಸುವುದಾಗಿ ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದು, ಇದಕ್ಕೆ ಸಿಪಿಐಎಂ ವಿರೋಧ ವ್ಯಕ್ತಪಡಿಸಿದೆ.
ವಾರಕ್ಕೊಮ್ಮೆ ಚಲಿಸುವ ಈ ರೈಲು ಯಶವಂತಪುರದಿಂದ ಶನಿವಾರ ರಾತ್ರಿ 11.55ಕ್ಕೆ ಬಿಟ್ಟು ಮುರುಡೇಶ್ವರಕ್ಕೆ ರವಿವಾರ ಮಧ್ಯಾಹ್ನ 12.55ಕ್ಕೆ ತಲುಪುತ್ತಿತ್ತು. ಇದು ವಾರಾಂತ್ಯದಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ಬರುವವರಿಗೆ ಮತ್ತು ಕರಾವಳಿ ಜಿಲ್ಲೆಗಳಿಗೆ ಅನುಕೂಲವಾಗುತ್ತಿದೆ. ಈ ರೈಲು ಆರಂಭವಾಗುತ್ತಲೇ ಶೇ.100ರಷ್ಟು ಆಸನಗಳು ಭರ್ತಿಯಾಗುತ್ತಿದ್ದು, ಲಾಭದಲ್ಲಿ ಚಲಿಸುತ್ತಿದೆ. ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ರೈಲು ಸೇವೆಯಿಂದ ಬಹುತೇಕ ವಂಚಿತರಾದ ಕರಾವಳಿಯ ಜನರಿಗೆ ಇದರಿಂದ ತೊಂದರೆಯಾಗುತ್ತದೆ. ಈ ರೈಲನ್ನು ಕಾರವಾರದವರೆಗೂ ಮುಂದುವರಿಸಬೇಕೆಂಬ ಬೇಡಿಕೆಯೂ ಇದೆ.
ಯಶವಂತಪುರ-ಬೆಂಗಳೂರು ರೈಲು ಹಿಂತೆಗೆತಕ್ಕೆ ಇಲಾಖೆ ಕೊಟ್ಟ ಕಾರಣ ಬಾಲಿಷವಾಗಿದೆ. ಲೋಕೊ ಪೈಲಟ್(ರೈಲು ಓಡುಸುವ ಚಾಲಕರು)ಗಳ ಕೊರತೆ ಇದೆ ಎಂಬುದು ಇಲಾಖೆಯ ವಾದ. ಸೂಕ್ತವಾದ ನೇಮಕಗಳನ್ನು ಇಲಾಖೆ ಮಾಡಬೇಕು. ವಿಶೇಷವೆಂದರೆ, ಹುಬ್ಬಳ್ಳಿ ವಲಯದ ರೈಲ್ವೆ ಅಧಿಕಾರಿಗಳು ಮೇಲೆ ಹೇಳಿದ ರೈಲ್ವೆ ಸೇವೆಯನ್ನು ಮುಂದುವರಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆಯಾಗಿ ಉಡುಪಿಯೂ ಸೇರಿದಂತೆ ಕರಾವಳಿಯ ಜನತೆ ಯಶವಂತಪುರ (ಬೆಂಗಳೂರು)- ಮುರುಡೇಶ್ವರ-ಯಶವಂತಪುರ (ನಂ.06563 /06564) ರೈಲನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳಬಾರದು. ರೈಲ್ವೆ ಇಲಾಖೆ ಇಲ್ಲಿನ ಜನರ ಅಗತ್ಯತೆಯನ್ನು ಗಮನಿಸಿ ರೈಲನ್ನು ಹಿಂತೆಗೆದುಕೊಳ್ಳ ಬಾರದೆಂದು ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆ ಯಲ್ಲಿ ಒತ್ತಾಯಿಸಿದ್ದಾರೆ. ಒತ್ತಾಯಿಸಿದೆ.