ಬೆಂಗಳೂರು: ವಿಮಾನದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ
Photo: PTI
ಬೆಂಗಳೂರು: ಬೆಂಗಳೂರಿನಿಂದ ಪುಣೆಗೆ ತೆರಳುತ್ತಿದ್ದ ವಿಮಾನದಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಕರ್ತವ್ಯದಲ್ಲಿಲ್ಲದ ಪೈಲಟ್ ಕಿರುಕುಳ ನೀಡಿದ್ದಾಗಿ ಆಪಾದಿಸಲಾಗಿದೆ. ಆಕಾಶ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ವಿಮಾನ ಸಿಬ್ಬಂದಿ ಹಾಗೂ ವಿಮಾನಯಾನ ಸಂಸ್ಥೆಗೆ ನೀಡಿದ ದೂರಿನಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.
ಈ ಪೈಲಟ್ ತನ್ನನ್ನು ಆಸನ ಬದಲಿಸುವಂತೆ ಒತ್ತಾಯಿಸಿ, ತನ್ನ ಸೀಟಿನ ಪಕ್ಕಕ್ಕೆ ಕರೆಸಿಕೊಂಡಿದ್ದ ಎನ್ನಲಾಗಿದೆ. ಮದ್ಯ ಸೇವಿಸುತ್ತಿದ್ದ ಪೈಲಟ್ ಈ ವಿದ್ಯಾರ್ಥಿನಿಗೂ ಮದ್ಯ ಸೇವಿಸುವಂತೆ ಕೇಳಿದ್ದಾನೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ ಅಕ್ಟೋಬರ್ 1ರಂದು ನಡೆದಿದೆ ಎನ್ನಲಾದ ಘಟನೆ ಬಗ್ಗೆ ವಿವರ ಪಡೆಯಲು ಮಹಿಳೆ ಲಭ್ಯರಿಲ್ಲದ ಹಿನ್ನೆಲೆಯಲ್ಲಿ ತನಿಖೆಗೆ ತಡೆ ಉಂಟಾಗಿದೆ ಎನ್ನುವುದು ಆಕಾಶ ಏರ್ ಸಂಸ್ಥೆಯ ತಿಳಿಸಿದೆ.
ನಾನು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಡಿದ ಪೋಸ್ಟ್ ಗೆ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿತ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ. ಇದಕ್ಕೆ ವಿಮಾನಯಾನ ಸಂಸ್ಥೆ ವಿಷಾದ ವ್ಯಕ್ತಪಡಿಸಿದ್ದು, ಆ ಬಳಿಕ ವಿಮಾನಯಾನ ಸಂಸ್ಥೆಯ ಯಾರೂ ಸಂಪರ್ಕಿಸಿಲ್ಲ ಎಂದು ವಿದ್ಯಾರ್ಥಿನಿ ದೂರಿದ್ದಾರೆ.
"ವಿಮಾನದ ಹಿಂಭಾಗದಲ್ಲಿ 32ಸಿ ಆಸನದಲ್ಲಿ ಕುಳಿತಿದ್ದೆ. ನನ್ನ ಲಗೇಜ್ ಕ್ಯಾಬಿನ್ನಲ್ಲಿ ಇಡುವಲ್ಲಿ ನೆರವಾಗುವ ನೆಪದಲ್ಲಿ ಸುಮಾರು 30 ವರ್ಷದ ವ್ಯಕ್ತಿ ಮಾತನಾಡಲು ಆರಂಭಿಸಿದ. ಈತ ಆಕಾಶ ಏರ್ ಸಂಸ್ಥೆಯ ಆಫ್ ಡ್ಯೂಟಿ ಪೈಲಟ್ ಎಂದು ಪರಿಚಯಿಸಿಕೊಂಡಿದ್ದಾನೆ. ಏರ್ಲೈನ್ ಐಡಿ ಕಾರ್ಡ್ ಕೂಡಾ ಕಂಡಿದೆ" ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಹೇಳಿದ್ದಾರೆ. ವಿಮಾನದ ಹಿಂಭಾಗಕ್ಕೆ ಬರುವಂತೆ ಸಿಬ್ಬಂದಿಯ ಮೂಲಕ ಸೂಚಿಸಿದ್ದ ಎನ್ನಲಾಗಿದೆ.