ಕರ್ನಾಟಕದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಪ್ರಪಂಚದಲ್ಲಿ ಎಲ್ಲೂ ಇಲ್ಲ: ರಾಹುಲ್ ಗಾಂಧಿ
ʼಗೃಹಲಕ್ಷ್ಮಿʼ ಚಾಲನೆ ಕಾರ್ಯಕ್ರಮ
Photo: Twitter/@RahulGandhi
ಮೈಸೂರು: ಕರ್ನಾಟಕದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ದೇಶದ ಯಾವುದೇ ರಾಜ್ಯಗಳಲ್ಲದೆ ಪ್ರಪಂಚದಲ್ಲೇ ಎಲ್ಲೂ ಇಲ್ಲ ಎಂದು ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಸಿದರು.
ನಗರದ ಮಹರಾಜ ಕಾಲೇಜು ಮೈದಾನದಲ್ಲಿ ಬುಧವಾರ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನಗೆ ಚಾಲನೆ ನೀಡಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಪಕ್ಷ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ದೇಶ ಅಲ್ಲ ಪ್ರಪಂಚದಲ್ಲೇ ದೊಡ್ಡ ಯೋಜನೆ, ಈ ಯೋಜನೆ ದೇಶದ ಯಾವುದೇ ರಾಜ್ಯಗಳಲ್ಲೂ ಅ್ಲದೆ ಪ್ರಪಂಚದಲ್ಲೇ ಎಲ್ಲೂ ಇಲ್ಲ ಎಂದು ಹೇಳಿದರು.
ಒಂದು ಮರ ಗಟ್ಟಿಯಾಗಿ ನಿಲ್ಲಬೇಕು ಎಂದರೆ ಹೇಗೆ ಬೇರುಗಳು ಗಟ್ಟಿಯಾಗಿರಬೇಕೊ ಹಾಗೆ ಒಂದು ದೇಶ ರಾಜ್ಯ ಉಳಿಯಬೇಕಾದರೆ ಮಹಿಳೆಯರು ಗಟ್ಟಿಯಾಗಿರಬೇಕು. ಹಾಗಾಗಿ ನಾವು ಕರ್ನಾಟಕದಲ್ಲಿ ಹಲವಾರು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ನಾನು ಭಾರತ್ ಜೋಡೋ ಯಾತ್ರೆ ಕೈಗೊಂಡ ವೇಳೆ ಕರ್ನಾಟಕದಲ್ಲಿ 600 ಕೀ.ಮೀ. ಪಾದಯಾತ್ರೆ ನಡೆಸಿದೆ. ಈ ವೇಳೆ ಮಹಿಳೆಯರ ಜೊತೆ ಮಾತುಕತೆ ನಡೆಸಿದೆ. ಆಗ ಅವರು ಪೆಟ್ರೋಲ್, ಗ್ಯಾಸ್, ಆಹಾರ ಪದಾರ್ಥಗಳ ಬೆಲೆ ಏರಿಕೆ ಕುರಿತು ತಮ್ಮ ಕಷ್ಟವನ್ನು ಹೇಳಿಕೊಂಡರು. ಇದು ನನ್ನ ಮನಸ್ಸಿಗೆ ಚುಚ್ಚಿತು. ಆಗಲೇ ನಾನು ನಿರ್ಧಾರ ಮಾಡಿ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚೆ ಮಾಡಿ ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು ಎಂದು ಹೇಳಿದರು.
ಈ ಯೋಜನೆ ಜಾರಿಯಿಂದ ಮಹಿಳೆಯರ ಸಬಲೀಕರಣವಾಗಿದೆ. ಮೊದಲು ಗೃಹ ಜ್ಯೋತಿ ಜಾರಿ ಮಾಡಿದೆವು.ನಂತರ ಮಹಿಳೆಯರು ಇಡೀ ರಾಜ್ಯದಲ್ಲೇ ಉಚಿತವಾಗಿ ಓಡಾಡಲು ಶಕ್ತಿ ಯೋಜನೆ ಜಾರಿ ಮಾಡಿದೆವು. ಬಳಿಕ ಅನ್ನ ಭಾಗ್ಯ ಜಾರಿಮಾಡಿದೆವು.ಇದೀಗ ಗೃಹಲಕ್ಷ್ಮಿ ಯೋಜನೆ ಜಾರಿಮಾಡಿದ್ದೇವೆ ಎಂದು ಹೇಳಿದರು.