ಕಾಸರಗೋಡು-ತಿರುವನಂತಪುರ ಆರು ಪಥದ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ 2025ರ ವೇಳೆಗೆ ಪೂರ್ಣ: ಸಚಿವ ಮುಹಮ್ಮದ್ ರಿಯಾಝ್
ಕಾಸರಗೋಡು: ಕಾಸರಗೋಡಿನಿಂದ ತಿರುವನಂತಪುರಂವರೆಗಿನ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಮುಹಮ್ಮದ್ ರಿಯಾಝ್ ಹೇಳಿದರು.
ಮಂಜೇಶ್ವರ ಗೋವಿಂದಪೈ -ನೆತ್ತಿಲಪದವು ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಜೇಶ್ವರ ಕ್ಷೇತ್ರದ ಅಭಿವೃದ್ಧಿ ಅರಿತು ರಾಜ್ಯ ಸರಕಾರ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ಸಾಗುತ್ತಿದೆ ಎಂದು ಸಚಿವರು ಹೇಳಿದರು.
ಕೇರಳೀಯರ ಕನಸಾಗಿರುವ ಕಾಸರಗೋಡಿನಿಂದ ತಿರುವನಂತಪುರವರೆಗಿನ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ 2025ರ ವೇಳೆಗೆ ಪೂರ್ಣಗೊಳ್ಳಲಿದೆ. ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಮುಂದಿನ ವರ್ಷಕ್ಕೆ ಪೂರ್ಣ ಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿಗೆ ಶೇ.25ರಷ್ಟು ಭೂಸ್ವಾಧೀನಕ್ಕೆ 5,600 ಕೋಟಿ ರೂ.ಗಳನ್ನು ಮೀಸಲಿಟ್ಟ ದೇಶದ ಮೊದಲ ರಾಜ್ಯ ಕೇರಳವಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ರಸ್ತೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಕೆ. ರಾಜೀವ್ ವರದಿ ಮಂಡಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಸ್.ಭಾರತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ. ಕಮಲಾಕ್ಷಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಅಬ್ದುಲ್ ಹಮೀದ್, ಬ್ಲಾಕ್ ಪಂಚಾಯತ್ ಸದಸ್ಯ ಮೊಯ್ದೀನ್ ಕುಂಞಿ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಯಾದವ ಬಡಾಜೆ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಬಿ.ಎಂ. ಕರುಣಾಕರ ಶೆಟ್ಟಿ, ಜಯರಾಮ ಬಳ್ಳಂಗು ಡಲ್ , ಪಿ.ಸೋಮಪ್ಪ, ಅಜೀಜ್ ಮರಿಕೆ, ಹರೀಶ್ಚಂದ್ರ , ರಾಘವ ಚೇರಾಳ್, ತಾಜುದ್ದೀನ್ ಮೊಗ್ರಾಲ್, ಸಿದ್ದಿಕ್ ಕೈಕಂಬ, ಡಾ. ಕೆ.ಎ.ಖಾದರ್ ಹಾಗೂ ಅಹ್ಮದಾಲಿ ಕುಂಪಲ ಮಾತನಾಡಿದರು.
ರಸ್ತೆ ವಿಭಾಗದ ಮುಖ್ಯ ಇಂಜಿನಿಯರ್ ಯು.ಪಿ. ಜಯಶ್ರೀ ಸ್ವಾಗತಿಸಿ, ಮಂಜೇಶ್ವರ ಲೋಕೋಪಯೋಗಿ ರಸ್ತೆ ವಿಭಾಗದ ಸಹಾಯಕ ಇಂಜಿನಿಯರ್ ವಿ.ವಿ. ಮಣಿಪ್ರಸಾದ್ ವಂದಿಸಿದರು.