ಗುಡ್ಡ ಕುಸಿತ: ಪಾಣತ್ತೂರು - ಕಲ್ಲಪಳ್ಳಿ - ಸುಳ್ಯ ಅಂತಾರಾಜ್ಯ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ
ಕಾಸರಗೋಡು : ಭಾರೀ ಮಳೆಯಿಂದ ಬೆಟ್ಟೊಳಿಯಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನೆಯಲ್ಲಿ ಪಾಣತ್ತೂರು - ಕಲ್ಲಪಳ್ಳಿ - ಸುಳ್ಯ ಅಂತಾರಾಜ್ಯ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಜಿಯೋಲಾಜಿಸ್ಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿರ್ಬಂಧಿಸಿ ಆದೇಶ ನೀಡಲಾಗಿದೆ. ವೆಳ್ಳರಿಕುಂಡು ತಹಶೀಲ್ದಾರ್ ನೀಡಿದ ವರದಿಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು , ಬಿರುಕು ಬಿಟ್ಟ ಗುಡ್ಡ, ಅವಘಡಕ್ಕೆ ಕಾರಣವಾಗಿರುವ ಮಣ್ಣು ಮೊದಲಾದವುಗಳನ್ನು ಪೂರ್ಣವಾಗಿ ತೆರವುಗೊಳಿಸಿದ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿವಾರಣಾ ಪ್ರಾಧಿಕಾರ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ರಸ್ತೆ ಮೇಲೆ ಬಿದ್ದಿರುವ ಮಣ್ಣು, ಕಲ್ಲುಗಳನ್ನು ತೆರವು ಗೊಳಿಸಿದ ಬಳಿಕ ಹಗಲು ಸಮಯ ನಿಯಂತ್ರಣಗಳೊಂದಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸ್ಥಳದಲ್ಲಿ ಪೊಲೀಸ್ ಮೊಕ್ಕಾ೦ ಹೂಡಲಾಗಿದೆ. ಪ್ರಯಾಣಿಕರು ಹಾಗೂ ಪರಿಸರವಾಸಿಗಳು ಮುನ್ನಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.