ಸಿರಿಬಾಗಿಲು ಪ್ರತಿಷ್ಠಾನದಲ್ಲಿ ತೆಂಕುತಿಟ್ಟು ಯಕ್ಷಮಾರ್ಗ 2 ಮತ್ತು ಯಕ್ಷಗಾನ ಹಿಮ್ಮೇಳ ತರಗತಿ ಉದ್ಘಾಟನೆ
ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ತೆಂಕುತಿಟ್ಟು ಯಕ್ಷ ಮಾರ್ಗ-೨ ಮತ್ತು ತೆಂಕುತಿಟ್ಟು ಹಿಮ್ಮೇಳ ತರಗತಿ ಯನ್ನು ಕೆ.ಕೆ.ಶೆಟ್ಟಿ ಅವರು ಸೋಮವಾರ ಉದ್ಘಾಟಿಸಿದರು.
ಪ್ರತಿಷ್ಠಾನದ ಮ್ಯೂಸಿಯಂ ವೀಕ್ಷಿಸಿದ ಬಳಿಕ ಮಾತನಾಡಿದ ಕೆ.ಕೆ.ಶೆಟ್ಟಿ, "ನೋಡಿ ಅಚ್ಚರಿಪಟ್ಟೆ, ಯಾರಿಂದಲೂ ಅಸಾಧ್ಯವಾದ ಬೃಹತ್ ಕೆಲಸವನ್ನು ಪ್ರತಿಷ್ಠಾನ ಮುಖೇನ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಮಾಡಿ ತೋರಿಸಿದ್ದಾರೆ. ಬಾಲ್ಯದಲ್ಲಿ ಮದಂಗಲ್ ಆನಂದ ಭಟ್ ಅವರಿಂದ ನಾಟ್ಯ ಅಭ್ಯಾಸ ಮಾಡಿ ಪೂನಾದಲ್ಲೂ, ಕಾಲೇಜ್ ವಿದ್ಯಾಭ್ಯಾಸ ಸಮಯದಲ್ಲೂ ಯಕ್ಷಗಾನ ವೇಷ ಮಾಡಿದ್ದೆ. ಪ್ರತಿಷ್ಠಾನದ ಮ್ಯೂಸಿಯಂ ನೋಡಿದಾಗ ನನ್ನ ಬಾಲ್ಯದ ಯಕ್ಷಗಾನದ ಪ್ರದರ್ಶನಗಳು ನೆನಪಿಗೆ ಬಂತು. ಮರೆಯಲಾಗದ ಮಹಾನುಭಾವರು ಕೀರ್ತಿಶೇಷರ ಭಾವಚಿತ್ರವನ್ನು ನೋಡಿದಾಗ ಹಿಂದಿನ ಕಾಲದ ಯಕ್ಷಗಾನಗಳು ನೆನಪಿಗೆ ಬಂತುʼʼ ಎಂದು ನುಡಿದರು.
ಶಿವರಾಮ್ ಭಟ್ ,ಹಳೆಮನೆ, ಕಾರಿಂಜಿೆ ಇವರು ಮುಖ್ಯ ಅತಿಥಿಯಾಗಿ ಮಾತನಾಡಿ ಸಿರಿಬಾಗಿಲು ಪ್ರತಿಷ್ಠಾನ ನಡೆಸುತ್ತಿರುವ ಅಧ್ಯಯನ ಯೋಗ್ಯ ಕಾರ್ಯಕ್ರಮಗಳನ್ನು ನೆನಪಿಸಿ ಶುಭ ಹಾರೈಸಿದರು.
ಡಾ. ಜಯಪ್ರಕಾಶ್ ತೊಟ್ಟೆತೋಡಿ, ಪ್ರಗತಿಪರ ಕೃಷಿಕರು ,ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರಿಯ ನಾಟ್ಯ ಗುರುಗಳಾದ ಶ್ರೀ ಕಗ್ಗಲು ವಿಶ್ವೇಶ್ವರ ಭಟ್, ಪ್ರತಿಷ್ಠಾನದಲ್ಲಿ ಹಿಮ್ಮೇಳ ತರಗತಿಯ ಗುರುಗಳಾದ ಶ್ರೀ ರಾಮಮೂರ್ತಿ ಕುದ್ರೆ ಕ್ಕೂಡ್ಲು ಉಪಸ್ಥಿತರಿದ್ದರು.
ಶ್ರೀ ರಾಜ ರಾಮರಾವ್ ಮೀಯಪದವು ನಿರೂಪಿಸಿದರೆ, ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅತಿಥಿಗಳನ್ನು ಸ್ವಾಗತಿಸಿದರು.
ಹಿಮ್ಮೇಳ ತರಗತಿ ಆರಂಭ
20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಿಮ್ಮೇಳ ತರಗತಿ ಆರಂಭಿಸಲಾಯಿತು. ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ವಿಶೇಷ ಪ್ರಾತ್ಯಕ್ಷಿಕೆ ನಡೆಯಿತು. ತಾಳದ ಸೃಷ್ಟಿ, ಕಾಲ ನಿರ್ಣಯ, ಕಾಲ-ವೇ ಷ ಸಂಬಂಧ ,ಕಾಲ -ವೇಷ- ಗತಿಗಳ ಸಂಬಂಧ, ರಂಗ ಚಲನೆ ಇತ್ಯಾದಿಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿದರು. ಶ್ರೀ ಶಂಭಯ್ಯ ಕಂಜರ್ಪಣೆ ಈ ಕಾರ್ಯಕ್ರಮವನ್ನು ನಿರ್ವಹಿಸಿದರು. 70ಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು. ನಾಟ್ಯ ಗುರುಗಳು ಭಾಗವಹಿಸಿದರು.