ಕಾಸರಗೋಡಿನ ಅಭಿವೃದ್ಧಿಗೆ ಸಾಂಸ್ಕೃತಿಕ ಪ್ರಗತಿ ಬಹಳ ಮುಖ್ಯ: ಯಹ್ಯಾ ತಳಂಗರ
ಕಾಸರಗೋಡು, ಆ.17: ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಂಸ್ಕೃತಿಕ ಪ್ರಗತಿ ಮತ್ತು ಸುಸ್ಥಿರತೆ ಬಹಳ ಮುಖ್ಯ. ಈ ಪ್ರದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯವನ್ನು ಮರುಪರಿಚಯಿಸುವುದು ಬಹಳ ಅಗತ್ಯ ಎಂದು ಉದ್ಯಮಿ, ವೆಲ್ ಫಿಟ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಯಹ್ಯಾ ತಳಂಗರ ಅಭಿಪ್ರಾಯಪಟ್ಟಿದ್ದಾರೆ.
ಬಿಲ್ಡಪ್ ಕಾಸರಗೋಡು ಸೊಸೈಟಿಯು 77ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ಸಮಾರಂಭ ಹಾಗೂ ಕಾಸರಗೋಡಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಆ.15ರಂದು ನೂತನ ಕಚೇರಿ ಆವರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ಕಲಾವಿದೆ ವಿದುಷಿ ಸರಸ್ವತಿ ಕೃಷ್ಣನ್, ಏಮ್ಸ್ ನಲ್ಲಿ NEET-UG ಟಾಪರ್ ಡಾ. ಝುಲೇಖಾ ತಳಂಗರ, ಪತ್ರಕರ್ತ ಬುರ್ಹಾನುದ್ದೀನ್ ಅಬ್ದುಲ್ಲಾ ಮತ್ತು ವೆಲ್ ಫಿಟ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಯಹ್ಯಾ ತಳಂಗರ ಅವರನ್ನು ಸನ್ಮಾನಿಸಲಾಯಿತು.
ಬಿಲ್ಡಪ್ ಕಾಸರಗೋಡು ಸೊಸೈಟಿಯ ಅಧ್ಯಕ್ಷ ರವೀಂದ್ರನ್ ಕನ್ನಂಕೈ ಅಧ್ಯಕ್ಷತೆ ವಹಿಸಿದ್ದರು.
ಅನೂಪ್ ಕಳನಾಡ್, ಡಾ.ರಶ್ಮಿಪ್ರಕಾಶ್, ಹರೀಶ್ ಕದಿರಿ, ಪ್ರೊ.ಸುಜಾತಾ, ಸಾದಿಕ್ ಮಂಜೇಶ್ವರಂ ಮತ್ತು ಅಬ್ದುಲ್ ನಾಸರ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಡಾ.ಶೇಖ್ ಬಾವಾ ಸ್ವಾಗತ ಭಾಷಣ ಮಾಡಿದರು. ಕೋಶಾಧಿಕಾರಿ ಝುಲೈಖಾ ಮಾಹಿನ್ ವಂದಿಸಿದರು.