ಕಾಸರಗೋಡು: ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ, ಲಾಠಿ ಪ್ರಹಾರ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇರಿ ಹಲವು ಮಂದಿಗೆ ಗಾಯ
ಕಾಸರಗೋಡು : ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಹಾಗೂ ಪ್ರತಿಪಕ್ಷ ನಾಯಕ ವಿ.ಡಿ ಸತೀಶನ್ ವಿರುದ್ಧ ಕೇರಳ ಸರಕಾರ ಸುಳ್ಳು ಮೊಕದ್ದಮೆ ಹೂಡಿ ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮಂಗಳವಾರ ನಡೆಸಿದ ಪ್ರತಿಭಟನಾ ಜಾಥಾ ಹಿಂಸಾರೂಪ ಪಡೆಯಿತು.
ಪೊಲೀಸ್ ಜಲಫಿರಂಗಿ ಹಾಗೂ ಲಾಠಿ ಪ್ರಹಾರದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿ ಪರಿಸರದಿಂದ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಾರಿಕೇಡ್ ಇರಿಸಿ ಪೊಲೀಸರು ತಡೆದರು. ಬಳಿಕ ನಡೆದ ಪ್ರತಿಭಟನಾ ಧರಣಿಯನ್ನು ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ಉದ್ಘಾಟಿಸಿದರು .
ಉದ್ಘಾಟನೆ ಬಳಿಕ ಕಾರ್ಯಕರ್ತರು ಬಾರಿಕೇಡ್ ಗಳನ್ನು ತಳ್ಳಿ ಮುನ್ನುಗ್ಗಲು ಯತ್ನಿಸಿದ್ದು , ಪೊಲೀಸರು ಹಲವು ಬಾರಿ ಜಲಫಿರಂಗಿ ಬಳಸಿದರು . ಪೊಲೀಸರು ಲಾಠಿಪ್ರಹಾರ ನಡೆಸಿದ್ದು, ಈ ಸಂದರ್ಭ ಜಿಲ್ಲಾಧ್ಯಕ್ಷ ಪಿ .ಕೆ ಫೈಸಲ್ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ.
ಕಲ್ಲೆಸೆತದಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.