ಕಾಸರಗೋಡು: ಅನೈತಿಕ ಪೊಲೀಸ್ ಗಿರಿ; ನಾಲ್ವರ ಬಂಧನ
ಕಾಸರಗೋಡು: ಪ್ರವಾಸಿ ತಾಣ ಬೇಕಲ ಕೋಟೆಗೆ ಬಂದಿದ್ದ ಆರು ಮಂದಿಯ ಮೇಲೆ ತಂಡವೊಂದು ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ರವಿವಾರ ಮೇಲ್ಪರಂಬದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಘಟನೆ ಗೆ ಸಂಬಂಧ ಪಟ್ಟಂತೆ ನಾಲ್ವರ ನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಮನ್ಸೂರ್ (41) ಅಬ್ದುಲ್ ಖಾದರ್ ಅಫೀಕ್ (37), ಮುಹಮ್ಮದ್ ನಿಸಾರ್ (38) ಮತ್ತು ಬಿ.ಕೆ ಆರಿಫ್ (32) ಎಂದು ಗುರುತಿಸಲಾಗಿದೆ.
ಗೆಳೆಯನ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬೇಕಲ ಕೋಟೆ ವೀಕ್ಷಿಸಲು ಬಂದಿದ್ದ ತಂಡದಲ್ಲಿ ಮೂವರು ಯುವಕರು ಹಾಗೂ ಮೂವರು ಯುವತಿಯರು ಇದ್ದರೆನ್ನಲಾಗಿದೆ.
ಬೇಕಲ ಕೋಟೆಯಿಂದ ಮರಳುವ ದಾರಿಯಲ್ಲಿ ಹೋಟೆಲ್ ವೊಂದರಲ್ಲಿ ಆಹಾರ ಸೇವಿಸಲು ಕಾರಿನಲ್ಲಿ ಮೇಲ್ಪರಂಬ ಬಳಿ ತಲುಪಿದಾಗ ತಂಡವೊಂದು ತಡೆದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ತಂಡವು ಅಸಭ್ಯವಾಗಿ ವರ್ತಿಸಿದ್ದಲ್ಲದೇ ವಾಹನದಿಂದ ಕೆಳಿಗಿಳಿಯಲು ಅನುವು ಮಾಡಿಕೊಡದೆ ಹಲ್ಲೆ ನಡೆಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಯುವತಿಯರನ್ನು ಪೋಷಕರನ್ನು ಕರೆಸಿ ಬಿಡುಗಡೆ ಗೊಳಿಸಲಾಗಿದ್ದು, ಬಂಧಿತರ ವಿರುದ್ಧ ಗುಂಪು ಹಲ್ಲೆ, ದಿಗ್ಬಂಧನ, ಹಲ್ಲೆ ಸೇರಿದಂತೆ ಹಲವು ಮೊಕದ್ದಮೆ ಹೂಡಲಾಗಿದೆ ಎಂದು ತಿಳಿದು ಬಂದಿದೆ.