ಕುಂಬಳೆ | ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಶಾಲಾ ವಿದ್ಯಾರ್ಥಿನಿ, ರಿಕ್ಷಾ ಚಾಲಕನ ಮೃತದೇಹಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿನಿ ಹಾಗೂ ಆಟೋ ರಿಕ್ಷಾ ಚಾಲಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕಯ್ಯಾರ್ ಮಂಡೆಕಾಪು ಎಂಬಲ್ಲಿ ನಡೆದಿದೆ.
ಮಂಡೆಕಾಪುವಿನ ಪ್ರಿಯೇಶ್ - ಚಂದ್ರಾವತಿ ದಂಪತಿ ಪುತ್ರಿ ಶ್ರೇಯಾ (15) ಮತ್ತು ಆಟೋ ಚಾಲಕ ಪ್ರದೀಪ್ (42) ಮೃತಪಟ್ಟವರು. ಬಾಲಕಿಯ ಮನೆಯಿಂದ ಅರ್ಧ ಕಿ.ಮೀ. ದೂರದ ಕಾಡಿನಲ್ಲಿ ರವಿವಾರ ಬೆಳಗ್ಗೆ 10:30ರ ಸುಮಾರಿಗೆ ಇವರಿಬ್ಬರ ಮೃತದೇಹಗಳು ಪತ್ತೆಯಾಗಿವೆ.
ಇವರಿಬ್ಬರು ಕಳೆದ ಫೆಬ್ರವರಿ 11ರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪೊಲೀಸ್ ದೂರ ದಾಖಲಾಗಿತ್ತು. ನಾಪತ್ತೆಯಾಗಿ ತಿಂಗಳಾಗುತ್ತಾ ಬಂದರೂ ಯಾವುದೇ ಸುಳಿವು ಲಭಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರದಿಂದ ಪೊಲೀಸರು ಹಾಗೂ ಪರಿಸರವಾಸಿಗಳು ಮನೆ ಪರಿಸರದ ಕಾಡನ್ನು ಕೇಂದ್ರೀಕರಿಸಿ ಶೋಧ ನಡೆಸಲಾರಂಭಿಸಿದ್ದರು. ಇಂದು ಬೆಳಗ್ಗೆ ಇಬ್ಬರ ಮೃತದೇಹಗಳು ಒಂದೇ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಎರಡು ಮೊಬೈಲ್ ಫೋನ್ ಗಳು, ಒಂದು ಕತ್ತಿ ಪತ್ತೆಯಾಗಿದೆ. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದರು.
ಸ್ಥಳೀಯ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಶ್ರೇಯಾ ಫೆಬ್ರವರಿ 11ರ ರಾತ್ರಿಯಿಂದ ದಿಢೀರ್ ನಾಪತ್ತೆಯಾಗಿದ್ದಳು. ಇದರ ಜೊತೆಗೆ ಪ್ರದೀಪ್ ನಾಪತ್ತೆಯಾಗಿದ್ದು , ಇಬ್ಬರು ಪರಾರಿಯಾಗಿರಬಹುದೆಂದು ಶಂಕಿಸಲಾಗಿತ್ತು. ಈ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಿಸಲಾಗಿತ್ತು.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.