ಪೂನೂರ್ ಮರ್ಕಝ್ ಗಾರ್ಡನ್ ನಲ್ಲಿ ಶಾಮಿಲ್ ಮಿನ್ಹಾಜ್ರ ಪುಸ್ತಕ ಬಿಡುಗಡೆ
(ಶಾಮಿಲ್ ಮಿನ್ಹಾಜ್)
ಕೋಝಿಕ್ಕೋಡ್: ಪೂನೂರ್ ಮದೀನತುನೂರ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಹಾಫಿಲ್ ಮುಹಮ್ಮದ್ ಶಾಮಿಲ್ ಮಿನ್ಹಾಜ್ (ಕೆ.ಸಿ. ರೋಡ್) ಬರೆದು ಮರ್ಕಝ್ ಗಾರ್ಡನ್ ಪ್ರಕಾಶನ ಸಂಸ್ಥೆ 'ಗ್ಲೋಕಲ್ ಮೀಡಿಯಾ' ಪ್ರಕಟಿಸಿದ ಇಂಗ್ಲಿಷ್ ಪುಸ್ತಕ "The essence of being; soul, mind and consciousness" (ಅಸ್ತಿತ್ವ, ಆತ್ಮ, ಮನಸ್ಸು ಮತ್ತು ಪ್ರಜ್ಞೆಯ ಸಾರ) ಇದರ ಬಿಡುಗಡೆ ಸಮಾರಂಭವು ಇತ್ತೀಚಿಗೆ ಮರ್ಕಝ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಮದೀನತುನೂರ್ ಸೀನಿಯರ್ ಮುದರ್ರಿಸ್ ಮುಹ್ಯಿದ್ದೀನ್ ಸಖಾಫಿ ಕಾವನೂರ್ ಪುಸ್ತಕ ಬಿಡುಗಡೆ ಮಾಡಿದರು. ಮರ್ಕಝ್ ಗಾರ್ಡನ್ ಆಡಳಿತಾಧಿಕಾರಿ ಅಬೂಸ್ವಾಲಿಹ್ ಸಖಾಫಿ ಪ್ರಥಮ ಪ್ರತಿಯನ್ನು ಸ್ವೀಕರಿಸಿದರು.
ಮಂಗಳೂರು ತಲಪಾಡಿ -ಕೆಸಿ ರೋಡ್ ನಿವಾಸಿಯಾದ ಶಾಮಿಲ್, ಮುಹಿಮ್ಮಾತ್ ನಲ್ಲಿ ಖುರ್ಆನ್ ಹಿಫ್ಝ್ ಜತೆಗೆ ಎಸೆಸೆಲ್ಸಿ ಹಾಗೂ ಕಾಂತಪುರಂ ರಬ್ಬಾನಿ ಕ್ಯಾಂಪಸ್ ನಲ್ಲಿ ಪಿಯುಸಿ ಮುಗಿಸಿ ಇದೀಗ ಪೂನೂರ್ ಮರ್ಕಝ್ ಗಾರ್ಡನ್ ನಲ್ಲಿ ಬಿ. ಎ. ಸೈಕಾಲಜಿ ಅಂತಿಮ ವರ್ಷದ 'ನೂರಾನಿ' ವಿದ್ಯಾರ್ಥಿಯಾಗಿದ್ದಾರೆ.
ರಾಜಸ್ಥಾನದ ಗಗ್ವಾನದಲ್ಲಿ ಹಿಫ್ಲುಲ್ ಖುರ್ಆನ್ ದೌರಾ ಪೂರ್ತಿ ಮಾಡಿದ ಇವರು ಅನೇಕ ರಾಷ್ಟ್ರೀಯ ಮಟ್ಟದ ಸೆಮಿನಾರ್ ಗಳಲ್ಲಿ ಮನಶ್ಶಾಸ್ತ್ರೀಯ ಪ್ರಬಂಧಗಳನ್ನು ಮಂಡಿಸಿದ್ದಾರೆ. ಎಸ್.ವೈ.ಎಸ್. ಮೂವತ್ತನೇ ವಾರ್ಷಿಕ ಸಮ್ಮೇಳನದಲ್ಲಿ ಹೊರತಂದ ಇಪ್ಪತ್ತು ಪುಸ್ತಕಗಳ ಪೈಕಿ 'ಆಲಾ ಹಝ್ರತ್' ಎಂಬ ಕನ್ನಡ ಪುಸ್ತಕ ಇವರು ಬರೆದದ್ದಾಗಿತ್ತು.
ಭಾಷಣ, ಬರಹ, ಗಾಯನ ರಂಗದ ಮೇರು ಪ್ರತಿಭೆಯಾದ ಇವರು ಸುನ್ನೀ ಸಂಘಟನಾ ಮುಂದಾಳು ಡಾ. ಎಮ್ಮೆಸ್ಸೆಂ ಝೖನೀ ಕಾಮಿಲ್ ಹಾಗೂ ಕೆ.ಸಿ. ರೋಡ್ ಮಿನ್ ಹಾಜ್ ಮಹಿಳಾ ಕಾಲೇಜು ಪ್ರಿನ್ಸಿಪಾಲ್ ಸಈದ ಫಾತಿಮಾ ಅಲ್ ಮಾಹಿರ ದಂಪತಿಯ ಹಿರಿಯ ಮಗ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮರ್ಕಝ್ ಗಾರ್ಡನ್ ಪ್ರೊ. ಡೈರೆಕ್ಟರ್ ಆಸಫ್ ನೂರಾನಿ, ಮುದರ್ರಿಸರಾದ ಮುಹ್ಯಿದ್ದೀನ್ ಸಖಾಫಿ ತಳೀಕೆರೆ, ಹುಸೈನ್ ಫೈಝಿ, ಅಬೂಬಕ್ಕರ್ ನೂರಾನಿ, ಉರ್ದು ವಿಭಾಗದ ಮುಖ್ಯಸ್ಥ ಇಮ್ತಿಯಾಝ್ ನೂರಾನಿ ಮುಂತಾದವರು ಉಪಸ್ಥಿತರಿದ್ದರು.