ಅಭಿವೃದ್ಧಿಯಲ್ಲಿನ ರಾಜಕೀಯ ರಾಜ್ಯದ ಹಿನ್ನಡೆಗೆ ಕಾರಣವಾಗಲಿದೆ: ಕೇರಳ ಸಿಎಂ ಪಿಣರಾಯಿ ವಿಜಯನ್
ರಾಜ್ಯ ಮಟ್ಟದ ನವಕೇರಳ ಸದಸ್ ಗೆ ಚಾಲನೆ
ಪೈವಳಿಕೆ (ಕಾಸರಗೋಡು): ಅಭಿವೃದ್ಧಿಯಲ್ಲಿನ ರಾಜಕೀಯ ರಾಜ್ಯದ ಹಿನ್ನಡೆಗೆ ಕಾರಣವಾಗಲಿದೆ. ಸರಕಾರದ ಯೋಜನೆಗಳ ಕುರಿತ ಪ್ರತಿಪಕ್ಷಗಳ ನಿಲುವು ಸರಿ ಅಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಅವರು ಶನಿವಾರ ಸಂಜೆ ಪೈವಳಿಕೆ ನಗರ ಹಯರ್ ಸೆಕಂಡರಿ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ ನವಕೇರಳ ಸದಸ್ ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೇಂದ್ರದ ಬಿಜೆಪಿ ಸರಕಾರ ಹಾಗೂ ಕಾಂಗ್ರೆಸ್ ನ ಧೋರಣೆಗಳನ್ನು ಟೀಕಿಸಿದ ಅವರು, ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು , ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಯು ಡಿ ಎಫ್ ನವಕೇರಳ ಸದಸ್ ಬಹಿಷ್ಕರಿಸಿದ್ದನ್ನು ಟೀಕಿಸಿದ ಅವರು, ಪ್ರತಿಪಕ್ಷಗಳ ಕ್ರಮ ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದರು.
ಲೈಫ್ ಯೋಜನೆಯಡಿ ನಾಲ್ಕು ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ, ಮೂರು ಲಕ್ಷ ಮಂದಿಗೆ ಭೂ ದಾಖಲೆಗಳನ್ನು ವಿತರಿಸಿದ್ದೇವೆ, 27.5 ಲಕ್ಷ ಮಂದಿ ಉಚಿತ ವೈದ್ಯಕೀಯ ಸೇವೆಯನ್ನು ಪಡೆದಿದ್ದಾರೆ ಎಂದು ವಿವರಿಸಿದರು.
ಅರ್ಹರಿಗೆ ಸವಲತ್ತು ನೀಡಲು ಆರ್ಥಿಕ ಮುಗ್ಗಟ್ಟು ಕಾರಣವಾಗುತ್ತಿದೆ. ಆದರೂ ಸರಕಾರ ಸವಲತ್ತು ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ಸರಕಾರ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರಕಾರ ಕೇರಳವನ್ನು ನಿರ್ಲಕ್ಷಿಸುತ್ತಿದೆ ಎಂದು ಹೇಳಿದರು. ವಿಳಂಬವಾಗಿರುವ ಪಿಂಚಣಿಯನ್ನು ಶೀಘ್ರ ವಿತರಿಸಲಾಗುವುದು. 2016ರ ಬಳಿಕ ಕೇರಳ ಬದಲಾಗಿದೆ. ಕಳೆದ ಏಳೂವರೆ ವರ್ಷಗಳಲ್ಲಿ ಕೇರಳ ಅಭಿವೃದ್ಧಿಯತ್ತ ಮುನ್ನಡೆ ಸಾಧಿಸಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕಂದಾಯ ಹಾಗೂ ವಸತಿ ಸಚಿವ ಕೆ . ರಾಜನ್ ಅಧ್ಯಕ್ಷತೆ ವಹಿಸಿದ್ದರು. ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್, ಜಲಸಂಪನ್ಮೂಲ ಸಚಿವ ರೋಷಿ ಆಗಸ್ಟಿನ್ , ವಿದ್ಯುತ್ ಸಚಿವ ಕೆ . ಕೃಷ್ಣನ್ ಕುಟ್ಟಿ , ಅರಣ್ಯ ಸಚಿವ ಎ . ಕೆ ಶಶೀ೦ದ್ರನ್ , ಸಾರಿಗೆ ಸಚಿವ ಆಂಟನಿ ರಾಜು , ದೇವಸ್ವಂ ಸಚಿವ ಕೆ . ರಾಧಾಕೃಷ್ಣನ್ , ಹಣಕಾಸು ಸಚಿವ ಕೆ . ಎನ್ ಬಾಲಗೋಪಾಲ್, ಕೈಗಾರಿಕಾ ಸಚಿವ ಪಿ. ರಾಜೀವ್ , ಪಶುಸಂಗೋಪನಾ ಸಚಿವೆ ಚಿಂಜು ರಾಣಿ , ನೋಂದಣಿ , ಸಹಕಾರಿ ಸಚಿವ ವಿ .ಎನ್ ವಾಸವನ್ , ಯುವಜನ ಕಲ್ಯಾಣ, ಮೀನುಗಾರಿಕಾ ಸಚಿವ ಸಜಿ ಚೆರಿಯನ್ , ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಜ್ , ಕ್ರೀಡಾ ಸಚಿವ ವಿ . ಅಬ್ದುಲ್ ರಹಮಾನ್ , ಆಹಾರ ಸಚಿವ ಜಿ. ಅರ್ ಅನಿಲ್ , ಸಮಾಜ ಕಲ್ಯಾಣ ಹಾಗೂ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು , ಸ್ಥಳೀಯಾಡಳಿತ ಸಚಿವ ಎಂ . ಬಿ ರಾಜೇಶ್ , ಕೃಷಿ ಸಚಿವ ಪಿ . ಪ್ರಸಾದ್ , ಶಿಕ್ಷಣ ಸಚಿವ ವಿ . ಶಿವನ್ ಕುಟ್ಟಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ವೀಣಾ ಜಾರ್ಜ್ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮೊದಲಾದವರು ಮಾತನಾಡಿದರು.
ಸಮಾರಂಭದಲ್ಲಿ ಕೇರಳ ತುಳು ಅಕಾಡಮಿ ಅಧ್ಯಕ್ಷ ಕೆ. ಆರ್ ಜಯಾನಂದ, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ , ಶಾಸಕರಾದ ಸಿ . ಎಚ್ ಕುಂಞ೦ಬು, ಎಂ. ರಾಜಗೋಪಾಲ್ ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ , ಸ್ವಾಗತ ಸಮಿತಿ ಉಪಾಧ್ಯಕ್ಷ ಬಿ. ವಿ ರಾಜನ್ , ಕಂದಾಯ ಅಧಿಕಾರಿ ಅತುಲ್ ಸ್ವಾಮಿನಾಥ್ , ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ . ಸುಬ್ಬಣ್ಣ ಆಳ್ವ , ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಎಸ್ , ಭಾರತಿ , ಮೀ೦ಜ ಪಂಚಾಯತ್ ಅಧ್ಯಕ್ಷ ಸುಂದರಿ ಆರ್ . ಶೆಟ್ಟಿ , ಮಾಜಿ ಇ . ಪಿ ಜಯರಾಜನ್ , ಮಾಜಿ ಸಂಸದ ಪಿ . ಕರುಣಾಕರನ್ , ಪಿ . ಕೆ ಶ್ರೀಮತಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ . ವೇಣು ಸ್ವಾಗತಿಸಿ , ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ವಂದಿಸಿದರು.
ವಿಶೇಷ ಬಸ್ಸಿನಲ್ಲಿ ಆಗಮಿಸಿದ ಮುಖ್ಯಮಂತ್ರಿ ಹಾಗೂ ಸಚಿವರು
ನವಕೇರಳ ಸದಸ್ ಗೆ ವ್ಯವಸ್ಥೆಗೊಳಿಸರುವ ವಿಶೇಷ ಐಷಾರಾಮಿ ಬಸ್ಸಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರು ಪೈವಳಿಕೆಗೆ ತಲಪಿದರು. ಕಾಸರಗೋಡು ಅತಿಥಿ ಗ್ರಹ ದಿಂದ ಮುಖ್ಯಮಂತ್ರಿ ಹಾಗೂ 20 ಸಚಿವರು ಬಸ್ಸಿನಲ್ಲಿ ಪ್ರಯಾಣ ಬೆಳೆಸಿದರು. ಕೇರಳದುದ್ದಕ್ಕೂ 140 ವಿಧಾನಸಭಾ ಕ್ಷೇತ್ರಗಳಿಗೂ ಈ ಬಸ್ಸಿನಲ್ಲೇ ಸಂಚಾರ ನಡೆಸುವರು.
ದೂರು ಸ್ವೀಕರಿಸಲು ಸ್ಥಳದಲ್ಲಿ ಏಳು ಕೌಂಟರ್ ಗಳನ್ನು ತೆರೆಯಲಾಗಿತ್ತು. ನೂರಾರು ಮಂದಿ ತಮ್ಮ ಅಹವಾಲು ಸಲ್ಲಿಸಿದರು. ಬೆಳಿಗ್ಗೆ ಯಿಂದಲೇ ದೂರು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿತ್ತು, ದೂರು ಸ್ವೀಕರಿಸಲು ಕೌಂಟರ್ ಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೇಮಿಸಲಾಗಿತ್ತು.
ವಿವಿಧ ಕ್ಷೇತ್ರಗಳ ಸಾಧಕರನ್ನು ಮುಖ್ಯಮಂತ್ರಿ ಸನ್ಮಾನಿಸಿದರು. ಉದ್ಘಾಟನಾ ಕಾರ್ಯಕ್ರಮದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.