ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ತಯಾರಿ ಪೂರ್ಣ
ಕಾಸರಗೋಡು : ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಪೂರ್ವ ಸಿದ್ಧತೆ ಪೂರ್ಣಗೊಂಡಿದ್ದು, ಜೂನ್ 4 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು , ಮಧ್ಯಾಹ್ನದೊಳಗೆ ಫಲಿತಾಂಶ ಹೊರ ಬೀಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಿ. ಬಿಜೋಯ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆರಿಯ ಕೇಂದ್ರ ವಿಶ್ವವಿದ್ಯಾನಿಲಯದ ಗಂಗೋತ್ರಿ , ಕಾವೇರಿ ,ಸಬರ್ ಮತಿ ಎಂಬ ಬ್ಲಾಕ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಗಂಗೋತ್ರಿ ಬ್ಲಾಕ್ ನಲ್ಲಿ ಮಂಜೇಶ್ವರ, ಕಾಸರಗೋಡು, ಉದುಮ ವಿಧಾನಸಭಾ ಕ್ಷೇತ್ರ, ಕಾವೇರಿ ಬ್ಲಾಕ್ ನಲ್ಲಿ ಕಾಞಂಗಾಡ್ , ತೃಕ್ಕರಿಪುರ, ಪಯ್ಯನ್ನೂರು ಹಾಗೂ ಕಲ್ಯಾ ಶ್ಯೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಸಬರ್ ಮತಿ ಬ್ಲಾಕ್ ನಲ್ಲಿ ಜಿಲ್ಲಾ ಚುನವಾಣಾಧಿಕಾರಿ ನೇತೃತ್ವದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಅಂಚೆ ಮತ ಹಾಗೂ 8. 30 ರಿಂದ ಮತಯಂತ್ರಗಳ ಎಣಿಕೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಒಟ್ಟು 1500 ಸಿಬಂದಿಗಳು , 9 ಮಂದಿ ಚೀಫ್ ಏಜಂಟ್, 663 ಏಜಂಟರ್ ಗಳು, 9 ಮಂದಿ ಅಭ್ಯರ್ಥಿಗಳಿಗೆ ಎಣಿಕಾ ಕೇಂದ್ರಕ್ಕೆ ತಲಪಲಿದ್ದಾರೆ. ಮತ ಎಣಿಕಾ ಕೇಂದ್ರದಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ. ಇದಲ್ಲದೆ ಮೊಬೈಲ್ ಸ್ಮಾರ್ಟ್ ವಾಚ್ , ಕ್ಯಾಲ್ಕುಲೇಟರ್ ಸೇರಿದಂತೆ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವಂತಿಲ್ಲ. ಯಮುನಾ ಬ್ಲಾಕ್ ನಲ್ಲಿ ಕಾರ್ಯಾಚರಿಸುವ ಮಾಧ್ಯಮ ಕೇಂದ್ರದಲ್ಲಿ ಮಾತ್ರ ಮೊಬೈಲ್ ಫೋನ್ ಬಳಸಬಹುದಾಗಿದೆ. ಕ್ಯಾಂಪಸ್ ನೊಳಗೆ ಪ್ರವೇಶಿಸಲು ಎಲ್ಲಾ ವಾಹನಗಳಿಗೆ ಪಾಸ್ ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಸಿಬಂದಿಗಳು ಚುನಾವಣಾಧಿಕಾರಿ ನೀಡುವ ಕ್ಯೂ ಆರ್ ಕೋಡ್ ಗುರುತು ಚೀಟಿಯನ್ನು ತರಬೇಕು . ಮಾಧ್ಯಮ ವರದಿಗಾರರಿಗೆ ಚುನಾವಣಾ ಆಯೋಗ ನೀಡುವ ಗುರುತು ಚೀಟಿ ಕಡ್ಡಾಯವಾಗಿದೆ. ಮಾಧ್ಯಮ ಕೇಂದ್ರದಲ್ಲಿ ಫಲಿತಾಂಶ ಪೂರ್ಣವಾಗಿ ಲಭಿಸಲಿದೆ. ಮತ ಎಣಿಕೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು 1200 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಜೆ 6 ಗಂಟೆ ತನಕ ಮಾತ್ರ ವಿಜಯೋತ್ಸವಕ್ಕೆ ಅನುಮತಿ ನೀಡಲಾಗಿದೆ. ವಿಜಯೋತ್ಸವ ನಡೆಯುವ ಕೇಂದ್ರಗಳ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಮಾತುಕತೆ ನೆಡೆಸಿ ಮಾಹಿತಿ ಪಡೆಯಲಾಗುವುದು . ಸೂಕ್ಷ್ಮ ಸ್ಥಳಗಳಲ್ಲಿ ವಿಶೇಷ ಪೊಲೀಸ್ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪ ಚುನಾವಣಾಧಿಕಾರಿ ಪಿ . ಅಖಿಲ್ , ಜಿಲ್ಲಾ ವಾರ್ತಾಧಿಕಾರಿ ಎಂ . ಮಧುಸೂದನನ್ ಮೊದಲಾದವರು ಉಪಸ್ಥಿತರಿದ್ದರು.