ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಗಾನ ಕ್ಷೇತ್ರದ ಸೇವೆ ಶ್ಲಾಘನೀಯ: ಖ್ಯಾತ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್
ಕಾಸರಗೋಡು: "ಸಿರಿಬಾಗಿಲು ಪ್ರತಿಷ್ಠಾನವು ಯಕ್ಷಗಾನ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ. ಪ್ರತಿಷ್ಠಾನದ ಧ್ಯೇಯೋದ್ದೇಶಗಳು ಕಲೆಯ ವಿಸ್ತರಣೆ ಹಾಗೂ ಪೋಷಣೆಯ ದೃಷ್ಟಿಯಿಂದ ತುಂಬ ಪೂರಕವಾಗಿವೆ. ಇಂತಹ ಕಾರ್ಯದಲ್ಲಿ ಪ್ರತಿಷ್ಠಾನವು ಐತಿಹಾಸಿಕ ಸಾಧನೆ ಗೈಯುತ್ತಿದೆ" ಎಂದು ತೆಂಕುತಿಟ್ಟು ಹಿಮ್ಮೇಳದ ಗುರು, ಖ್ಯಾತ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಸಂಯೋಜಿಸಿದ ಭಾಗವತಿಕೆ ಅದ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಕ್ಷಗಾನ ಭಾಗವತಿಕೆಯ ಅಭ್ಯಾಸಿಗಳಿಗಾಗಿ ಒಂದು ದಿನದ ವಿಶೇಷ ಅಧ್ಯಯನ ಶಿಬಿರವನ್ನು ಪ್ರತಿಷ್ಠಾನವು ಆಯೋಜಿಸಿತ್ತು. ಶಿಬಿರದ ಆಶಯ ಮತ್ತು ಉದ್ದೇಶಗಳ ಕುರಿತು ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್ ಮಾತನಾಡಿದರು. ಪ್ರತಿಷ್ಠಾನದ ಆಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಶ್ರುತಕೀರ್ತಿ ರಾಜ ನಿರೂಪಿಸಿದರು.
ಶಿಬಿರಾರ್ಥಿಗಳಿಗಾಗಿ ಕಂಠಸ್ವರವನ್ನು ಸಶಕ್ತಗೊಳಿಸುವ ಹಾಗೂ ವೃದ್ಧಿಸಿಕೊಳ್ಳುವ ವಿಧಾನವನ್ನು ಖ್ಯಾತ ಯೋಗಶಿಕ್ಷಕ ಪುಂಡರಿಕಾಕ್ಷ ಅವರು ಕಲಿಸಿಕೊಟ್ಟರು. ಕಂಠಸ್ವರದ ರಕ್ಷಣೆಗಾಗಿ ಯೋಗ, ಪ್ರಾಣಾಯಾಮಗಳ ಅಭ್ಯಾಸವನ್ನು ಅವರು ಪ್ರಾತ್ಯಕ್ಷಿಕೆಯ ಮೂಲಕ ಮಾಡಿಸಿದರು. ಬಳಿಕ ಚೌಕಿ ಹಾಗು ರಂಗದಲ್ಲಿ ಭಾಗವತನ ಕರ್ತವ್ಯಗಳ ಕುರಿತುಖ್ಯಾತ ಕಲಾವಿದ ಸುಬ್ರಾಯ ಹೊಳ್ಳ, 'ರಂಗಸ್ಥಳದಲ್ಲಿ ಮಾತು- ಗೀತ- ಮೌನ' ಎಂಬ ವಿಶಿಷ್ಟ ವಿಷಯದ ಕುರಿತು ಕಲಾವಿದ ಪ್ರಾಧ್ಯಾಪಕ ಪೃಥ್ವೀರಾಜ್ ಕವತ್ತಾರ್ ಕಾರ್ಯಕ್ರಮ ನಡೆಸಿಕೊಟ್ಟರು. ಭಾಗವತಿಕೆ ದೃಷ್ಟಿಯಿಂದ ಪೂರ್ವರಂಗದ ಮಾಹಿತಿಯನ್ನು ತಿಳಿಸಿದ ಭಾಗವತ ಪುತ್ತೂರು ರಮೇಶ್ ಭಟ್ ಅವರು ಪೂರ್ವರಂಗದ ಪದ್ಯಗಳ ಸಕ್ರಮ ಅಭ್ಯಾಸ ಅತ್ಯಗತ್ಯ ಎಂದರು.
ಭಾಗವತಿಕೆ ಮಾಡುವಾಗ ಧ್ವನಿವರ್ಧಕದ ಬಳಕೆ ಹೇಗಿರಬೇಕು ಎಂಬುದನ್ನು ಪ್ರಾತ್ಯಕ್ಷಿಕೆಗಳ ಜತೆ ತೋರಿಸಿದವರು ಮಡಿಕೇರಿ ಆಕಾಶವಾಣಿಯ ಸುಬ್ರಾಯ ಸಂಪಾಜೆ. ಹವ್ಯಾಸಿ ಭಾಗವತರಾದ ರಾಜಾರಾಮ ಹೊಳ್ಳ ಕೈರಂಗಳ ತಮ್ಮ ಸಲಹೆಯನ್ನಿತ್ತರು. ಕಾಲಮಿತಿ ಪ್ರಸಂಗದ ಗತಿಯನ್ನು ನಿರ್ಣಯಿಸುವುದು ಹೇಗೆ ಎಂದು ಪ್ರಾಧ್ಯಾಪಕ ಸುಣ್ಣಂಗುಳಿ ಶ್ರೀ ಕೃಷ್ಣ ಭಟ್ ವಿವರಿಸಿದರು.
ಛಂದಸ್ಸು, ಸಾಹಿತ್ಯಕ್ಕೆ ಲೋಪವಾಗದೆ ಯಕ್ಷಗಾನ ಹಾಡುಗಾರಿಕೆ ಮಾಡುವುದು ಹೇಗೆ ಎಂದು ಕಟೀಲು ಮೇಳದ ಭಾಗವತ ಅಂಡಾಲ ದೇವಿಪ್ರಸಾದ್ ಶೆಟ್ಟಿ ಪ್ರಾತ್ಯಕ್ಷಿಕೆಗಳ ಮಿಲಕ ತಿಳಿಸಿದರು. ಭಾಗವತ ದಿನೇಶ ಭಟ್ ಯಲ್ಲಾಪುರ ಸಹಕರಿಸಿದರು. ಎಲ್ಲ ಪ್ರಾತ್ಯಕ್ಷಿಕೆಗಳಿಗೂ ಹಿಮ್ಮೇಳ ವಾದಕರಾಗಿದ್ದವರು ಮುರಾರಿ ಕಡಂಬಳಿತ್ತಾಯ, ನೆಕ್ಕರೆಮೂಲೆ ಗಣೇಶ ಭಟ್ ಮತ್ತು ಮುರಾರಿ ಪಂಜಿಗದ್ದೆ. ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಕಲಾವಿದ ಶಂಭಯ್ಯ ಕಂಜರ್ಪಣೆ, ಲಕ್ಷ್ಮಣ ಕುಮಾರ್ ಮರಕಡ, ಹರೀಶ್ ಬಳಂತಿಮೊಗರು, ವೈಕುಂಠ ಹೇರ್ಳೆ ಸಾಸ್ತಾನ ಮುಂತಾದವರು ಭಾಗವಹಿಸಿ ಅನಿಸಿಕೆ ವ್ಯಕ್ತಪಡಿಸಿದರು.
ಶಿಬಿರದ ಕೊನೆಯಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಶಿಬಿರದ ಅವಧಿಯಲ್ಲಿ ಅನೇಕ ಯಕ್ಷಗಾನ ಕ್ಷೇತ್ರದ ಸುಪ್ರಸಿದ್ಧರು, ವಿದ್ವಾಂಸರು ಪಾಲ್ಗೊಂಡು ಮಾರ್ಗದರ್ಶನವಿತ್ತರು. ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೂ ಪ್ರಮಾಣಪತ್ರ ಮತ್ತು ಪುಸ್ತಕ ಹಾರವನ್ನು ನೀಡಲಾಯಿತು.