ಕೇರಳ | ಆರೆಸ್ಸೆಸ್ ಮುಖಂಡನ ಮನೆಯಿಂದ 770 ಕೆಜಿ ಸ್ಫೋಟಕ ವಶ
ಕಣ್ಣೂರು : ಜಿಲ್ಲೆಯ ಪೊಯಿಲೂರಿನಲ್ಲಿರುವ ಆರೆಸ್ಸೆಸ್ ಮುಖಂಡ ಮತ್ತು ಆತನ ಸಂಬಂಧಿಕರ ನಿವಾಸದಿಂದ 770 ಕೆಜಿ ಸ್ಫೋಟಕಗಳ ಗಣನೀಯ ಸಂಗ್ರಹವನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ ಎಂದು maktoobmedia.com ವರದಿ ಮಾಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಳೀಯ ಮುಖಂಡ ವಡಕಯಿಲ್ ಪ್ರಮೋದ್ ಮತ್ತು ಅತನ ಸಂಬಂಧಿ ವಡಕಯಿಲ್ ಶಾಂತಾ ಅವರ ಮನೆಗಳಲ್ಲಿ ಸ್ಪೋಟಕಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
"ಮಾಹಿತಿಯ ಆಧಾರದ ಮೇಲೆ ಕೊಲವಲ್ಲೂರು ಪೊಲೀಸ್ ಇನ್ಸ್‌ಪೆಕ್ಟರ್ ಸುಮೀತ್ ಕುಮಾರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸೋಬಿನ್ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಭಾರೀ ಪ್ರಮಾಣದ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಕೊಳವಲ್ಲೂರು ಪೊಲೀಸರು ತಿಳಿಸಿದ್ದಾರೆ.
"ಪ್ರಾಥಮಿಕ ತನಿಖೆಗಳ ಪ್ರಕಾರ ಸ್ಫೋಟಕಗಳನ್ನು ಅಕ್ರಮವಾಗಿ ವಿತರಿಸಲು ಸಂಗ್ರಹಿಸಿಡಲಾಗಿತ್ತು ಎಂದು ತಿಳಿದು ಬಂದಿದೆ. ನಾವು ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ. ಈ ಸಂಬಂಧಿತ ಬೆಳವಣಿಗೆಗಳ ಮಧ್ಯೆ, ಸ್ಥಳೀಯ ಪ್ರದೇಶದ ಸುರಕ್ಷತೆಗೆಗಾಗಿ ಭದ್ರತೆಯನ್ನು ಹೆಚ್ಚಿಸುತ್ತಿದ್ದೇವೆ, ”ಎಂದು maktoobmedia.com ಗೆ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು, ವಾರ್ತಾ ಭಾರತಿಯೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಕೊಳವಲ್ಲೂರು SHO, ಸ್ಪೋಟಕಗಳನ್ನು ವಶಪಡಿಸಿಕೊಂಡಿರುವುದು ನಿಜ. ಆದರೆ ಈ ಸ್ಫೋಟಕಗಳನ್ನು ಯುಗಾದಿ ಹಬ್ಬದ ಸಮಯದಲ್ಲಿ ಪಟಾಕಿಗಳಿಗಾಗಿ ಬಳಸಲಾಗುತ್ತಿತ್ತು ಎಂದು ಹೇಳಿದರು. ಈ ಸಂಬಂಧ ಪ್ರಮೋದ್‌ನನ್ನು ಬಂಧಿಸಲಾಗಿದೆ ಎಂದೂ ಅವರು ತಿಳಿಸಿದರು.
ಪ್ರಮೋದ್ ಆರೆಸ್ಸೆಸ್ನೊಂದಿಗೆ ನಂಟು ಹೊಂದಿದ್ದು, ಸಂಘಟನೆಯ ಸ್ಥಳೀಯ ನಾಯಕರಲ್ಲಿ ಆತ ಒಬ್ಬ ಎಂದು SHO ದೃಢಪಡಿಸಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಗಣನೀಯ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಳೆದ ವರ್ಷ, ಕಣ್ಣೂರಿನ ಎರಂಜೋಲಿಪಾಲಂ ಬಳಿ ಬಾಂಬ್ ತಯಾರಿಕೆ ವೇಳೆ ಸ್ಫೋಟ ಸಂಭವಿಸಿ ಆರೆಸ್ಸೆಸ್ಗೆ ಸೇರಿದ ಯುವಕ ತೀವ್ರ ಗಾಯಗೊಂಡಿದ್ದನು. ಘಟನೆಯಲ್ಲಿ ವಿಷ್ಣು (20) ಅವರ ಅಂಗೈ ಒಡೆದು ಛಿದ್ರವಾಗಿತ್ತು. ವಿಷ್ಣು ತನ್ನ ಮನೆಯ ಸಮೀಪದ ಮೈದಾನದಲ್ಲಿ ಬಾಂಬ್ ತಯಾರಿಸುವಾಗ ಸ್ಫೋಟ ಸಂಭವಿಸಿತ್ತು.