ಕೊ-ಕೋಲಿ-ಕೊರವಿ ದ್ರಾವಿಡ ಸಂಸ್ಕೃತಿಯ ತಾಯಿಬೇರು
Ko-Koli-Koravi is the mother root of Dravidian culture
ದ್ರಾವಿಡ ಸಮುದಾಯ ತನ್ನ ಪೂರ್ವಿಕ ಸಂಸ್ಕೃತಿಯ ಮೂಲ ಸ್ವರೂಪವನ್ನೇ ಮರೆತಿರುವುದರಿಂದ, ವಿಸ್ಮತಿಗೆ ಸರಿದಿರುವ ಕೆಲವಾದರೂ ಮುಖ್ಯ ಅಂಶಗಳನ್ನು ಇಲ್ಲಿ ನೆನಪಿಸಿ, ವಿವರಿಸಲು ಪ್ರಯತ್ನಿಸುತ್ತೇನೆ. ಹರಪ್ಪ ನಾಗರಿಕತೆಯನ್ನು ರೂಪಿಸಿದವರು ದ್ರಾವಿಡರೇ ಎಂಬ ಅಂಶವನ್ನು ರಾಖ್ಹಿಗರಿಯ ಡಿ ಎನ್ ಎ ಅಧ್ಯಯನಗಳು ವಿವಾದಕ್ಕೆಡೆಯಿಲ್ಲದಂತೆ ದೃಢಪಡಿಸಿದೆ. ಈ ಹರಪ್ಪ ನಾಗರಿಕತೆಯನ್ನು ಎಲ್ಲ ವಿದ್ವಾಂಸರು ಇಂಡಸ್ ಕಣಿವೆಯ ನಾಗರಿಕತೆ (ಐ್ಖಇ) ಎಂತಲೇ ಕರೆಯುವುದಕ್ಕೆ ರೂಢಿಬಿದ್ದು ಹೋಗಿದ್ದಾರೆ. ಆದರೆ ವೈದಿಕಪೂರ್ವದಲ್ಲಿ ಇಂಡಸ್ - ಹಿಂದು - ಸಿಂಧು ನದಿಯನ್ನು ‘ಮಿಹ್ರಾನ್’ ಅಂತ ಕರೆಯುತ್ತಿದ್ದರು. (ಚಿತ್ರ 1)ಇದಕ್ಕೆ ಕೆಲವಾದರೂ ಸಾಕ್ಷ್ಯಾಧಾರಗಳು ಇನ್ನೂ ಉಳಿದಿವೆ ಎಂಬುದೆ ಸಮಾಧಾನದ ಸಂಗತಿ. ಆದರೆ ವೈದಿಕಪೂರ್ವದಲ್ಲಿ ಯಾರು, ಯಾವಾಗ ಮತ್ತು ಯಾಕಾಗಿ ಈ ನದಿಗೆ ಮಿಹ್ರಾನ್ ಎಂಬ ಹೆಸರನ್ನಿಟ್ಟರು ಎಂಬಂಶವು ಮಾತ್ರ ಇನ್ನೂ ಗೋಜಲಾಗಿಯೇ ಉಳಿದಿದೆ. ಒಂದಂತೂ ಸತ್ಯ ; ಮಿಹ್ರಾನ್ (Mihiraan) ಎಂಬ ಪದವಂತೂ ದ್ರಾವಿಡ ಭಾಷಾ ಕುಟುಂಬದ್ದಲ್ಲ. ನಿಘಂಟುಗಳು ಪರ್ಷಿಯನ್ ಹಾಗೂ ಅರೇಬಿಕ್ ಮೂಲಗಳತ್ತಲೇ ಬೊಟ್ಟು ಮಾಡುತ್ತವೆ. ಪರ್ಷಿಯನ್ ಭಾಷೆಯಲ್ಲಿ ಮಿತ್ರನೊಂದಿಗೆ, ಸೂರ್ಯ, ಬೆಳಕು ಎಂಬರ್ಥವಿದೆ. ಅದು ಹೇಗೋ ಉರ್ದು ಭಾಷೆಯಲ್ಲಿ ಕನಿಷ್ಠ ‘ಒಂದು ನದಿಯ ಹೆಸರು’ ಎಂಬುದಾದರೂ ಉಳಿದಿದೆ. ಆದರೂ ಸುತ್ತಿ ಬಳಸಿದ ರೀತಿಯಲ್ಲಿ ಮಿಹಿರಾನ್ (Mihiraan) ಎಂದರೆ ಶಿವನ ಒಂದು ಹೆಸರು ಎಂಬರ್ಥವೂ ಲಭ್ಯವಿದೆ. ತಮಿಳಿನಲ್ಲಿ ಶಿವಪ್ಪು - ಶಿಗಪ್ಪು ಎಂದರೆ ಕೆಂಪು ಎಂಬರ್ಥವಿದೆ. (ಶಿಕಪ್ಪು ರೋಜಾಗಳ್ - ಖeಜ ಡಿoses ಚಲನಚಿತ್ರವನ್ನು ನೆನಪಿಸಿಕೊಳ್ಳಿ). ಈ ಕೆಂಪು ಬಣ್ಣದ ಕಾರಣದಿಂದಲೇ ಶಿವನನ್ನು ಸೂರ್ಯನೊಂದಿಗೆ ಸಮೀಕರಿಸುವುದುಂಟು. ಹಾಗಾಗಿ ಶಿವನೇ ಮಿಹಿರಾನ್ ಅಂತಾದಂತಿದೆ. ಹರಪ್ಪ ನಾಗರಿಕತೆಯಲ್ಲಿ ಶಿವನ ಪ್ರಾಗ್ರೂಪವು ಇರುವುದರಿಂದ, ಅಲ್ಲಿ ಹರಿಯುತ್ತಿದ್ದ ನದಿಗೆ ಮಿಹಿರಾನ್ ಅಥವ ಮಿಹ್ರಾನ್ ಎಂಬ ಹೆಸರನ್ನು ನೀಡಿರಬಹುದಾಗಿದೆ. ಮಿಹಿರಾನ್ ಎಂಬ ಹೆಸರು ಸುಮೇರಿಯನ್ನರು ಇಲ್ಲವೆ ಅಕ್ಕಾಡಿಯನ್ನರಿಂದ ಬಳುವಳಿಯಾಗಿ ಬಂದಿರಬಹುದೇ? ಈ ಕುರಿತು ಇನ್ನಷ್ಟು ಮಾಹಿತಿ ಹಾಗೂ ಸ್ಪಷ್ಟನೆ, ಅಧ್ಯಯನಗಳ ಅಗತ್ಯವಂತೂ ಖಂಡಿತ ಇದೆ. ಪಾರ್ಸಿಗಳು ಮತ್ತು ವೈದಿಕಾರ್ಯರು ಭಾರತದ ವಾಯುವ್ಯ ಭಾಗದ ಈ ಪ್ರದೇಶಕ್ಕೆ ಬರುವುದಕ್ಕೂ ಹಿಂದೆಯೇ ಈ ನದಿಗೆ ಬೇರೊಂದು ಹೆಸರಿತ್ತು ಎಂಬಂಶವೇ ಇಲ್ಲಿ ಮುಖ್ಯ. ಯಾಕೆಂದರೆ ಗ್ರೀಕೋ-ರೋಮನ್ನರು ಚಾಲ್ತಿಗೆ ತಂದ ಇಂಡಸ್ ಎಂಬ ಪದ ಅಂತಿಮವಾಗಿ ಹಿಂದೂ - ಸಿಂದೂ ಎಂಬ ಪದಗಳ ಮೂಲಕ್ಕೇ ಹೋಗಿ ನಿಲ್ಲುತ್ತದೆ.
ಸಿಂಧಿ ಸಮುದಾಯದವರು ಇಂದಿಗೂ ಪುರಲಿ, ಸಿಂಧು ಎಂಬ ಹೆಸರುಗಳೊಂದಿಗೆ ಈ ನದಿಯ ವೈದಿಕಪೂರ್ವ ಹೆಸರಾಗಿದ್ದ ಮಿಹ್ರಾನ್ ಎಂಬ ಹೆಸರಲ್ಲೂ ಕರೆಯುತ್ತಾರಂತೆ. 9ನೇ ಶತಮಾನದ ಅರಬ್ ಪ್ರವಾಸಿ ಅಲ್ ಮಸೂದಿಯು ಕೂಡ ಈ ನದಿಯ ಪ್ರಾಚೀನ ಹೆಸರು ಮಿಹ್ರಾನ್ ಅಂತಲೇ ಇತ್ತು ಎಂಬಂಶವನ್ನು ಅಂದಿನ ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆಯೇ ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಹರಪ್ಪ ನಾಗರಿಕತೆ ತನ್ನ ಉತ್ತುಂಗದಲ್ಲಿದ್ದ 4500 ವರ್ಷಗಳ ಹಿಂದೆ ವೈದಿಕಾರ್ಯರೊಂದಿಗೆ ಅವರ ಭಾಷೆಯಾದ ಸಂಸ್ಕೃತವೂ ‘ಕೊಲೇರಿಯ’ (ಭಾರತದ ವೈದಿಕ ಪೂರ್ವ ಹೆಸರು. /ಎನ್‌ಸೈಕ್ಲೋಪೀಡಿಯಾ ಆಫ್ ಇಂಡಿಯ - ಸಂ: ಸುಭೋದ್ ಕಪೂರ್) ದೇಶದೊಳಕ್ಕಿನ್ನೂ ಪ್ರವೇಶಿಸಿಯೇ ಇರಲಿಲ್ಲವಲ್ಲ. (ಚಿತ್ರ 2) ಹಾಗಾಗಿ ಹರಪ್ಪ - ಮೆಲುಹ ನಾಗರಿಕತೆಯನ್ನು ಇಂದು ಸಂಸ್ಕೃತ ಭಾಷೆಯ ‘ಸಿಂದೂ - ಸರಸ್ವತಿ ಕಣಿವೆಯ ನಾಗರಿಕತೆ’ ಎಂದು ಕರೆಯುವುದು ಖಂಡಿತ ಇತಿಹಾಸಕ್ಕೆ ಮಾಡುವ ಅಪಚಾರವಷ್ಟೇ ಆಗಬಲ್ಲದು. ಇಂತಹ ಕಾರಣಗಳಿಂದಲೇ ‘ಸಿಂಧೂ ನಾಗರಿಕತೆ ವೈದಿಕ ಸಂಸ್ಕೃತಿಯದ್ದು’ ಅನ್ನುವ ಪ್ರಲಾಪಗಳು ಹುಟ್ಟಿಕೊಳ್ಳುವುದು.
ಇಲ್ಲಿ ಹರಪ್ಪ ಪದದೊಂದಿಗೆ ಮೆಲುಹ ಅನ್ನುವ ಪದವನ್ನು ಬಳಸಿದ್ದರ ಬಗ್ಗೆಯೂ ಒಂದಷ್ಟು ವಿವರಣೆ ಅಗತ್ಯವೆನಿಸುತ್ತದೆ. ಮೆಸಪೊಟೇಮಿಯಾದ ದಕ್ಷಿಣದಲ್ಲಿದ್ದ ಸುಮೇರಿಯನ್ನರೊಂದಿಗೆ ದ್ರಾವಿಡರು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕ್ರಿ.ಪೂ. 3,000 ವರ್ಷಗಳ ಹಿಂದಿನ ಮೆಸಪೊಟೇಮಿಯಾದ ಪ್ರಾಕ್ತನ ದಾಖಲೆಗಳಲ್ಲಿ ಹರಪ್ಪ ನಾಗರಿಕತೆಯ ಪ್ರದೇಶವನ್ನು ಸುಮೇರಿಯನ್ನರು ಮೆಲುಹ್ಹ (Meluhha) ಅಂತಲೇ ಗುರುತಿಸಿದ್ದಾರೆ. ಮೆಲುಹನ್ನರನ್ನು ಆದಿಮ ದ್ರಾವಿಡರೆಂದು ಕರೆದಿರುವ ಆಸ್ಕೋ ಪರ್ಪೋಲ (Asko Purpola) ಅವರು ಬಲೂಚಿಸ್ತಾನವನ್ನು ಆದಿಮ ದ್ರಾವಿಡರ ತವರುನೆಲವೆಂದೂ ಉಲ್ಲೇಖಿಸುತ್ತಾರೆ. ಅದರೊಂದಿಗೆ ಮೆಲುಹ್ಹ ಅಥವ ಮೆಲುಖ್ಖ ಎಂಬ ಪದವು ದ್ರಾವಿಡ ಭಾಷೆಯ ಮೇಲ್ (ಎತ್ತರದ್ದು) ಮತ್ತು ಅಕಂ (ಪ್ರದೇಶ) ಎಂಬ ಪದಗಳಿಂದ ರೂಪುಗೊಂಡಿರಬಹುದೆಂದು ತರ್ಕಿಸಿದ್ದಾರೆ. ಇದರೊಂದಿಗೆ ಹರಪ್ಪ ನಾಗರಿಕತೆಯ ಅವನತಿಯ ಕಾಲಘಟ್ಟದಲ್ಲಿ ಪ್ರವೇಶಿಸಿದ ವೈದಿಕಾರ್ಯರು ಇದೇ ಮೆಲುಹನ್ನರನ್ನೇ ಮ್ಲೇಚ್ಛರೆಂದು ಕರೆದದ್ದು ಎಂದೂ ಅಭಿಪ್ರಾಯ ಪಡುತ್ತಾರೆ. ಮ್ಲೇಚ್ಛ ಎಂದರೆ barbarian (barbaric ಕ್ರೂರ/ಬರ್ಬರ) ಅಂತ ಅರ್ಥ. ಇಂದು ಇದೇ ಮೆಲುಹನ್ ಮ್ಲೇಚ್ಛರೇ ತಮ್ಮನ್ನು ತೆಗಳಿ, ಹೀಯಾಳಿಸಿದ ವೈದಿಕಾರ್ಯರ ಸನಾತನ ಸಂಸ್ಕೃತಿಯನ್ನು ರಕ್ಷಿಸಲು ತಮ್ಮ ತೋಳ್ಬಲದೊಂದಿಗೆ ಜೀವ ತೇಯುತ್ತಿರುವವರು! ಗುಲಾಮಿ ಮನಃಸ್ಥಿತಿಯ ವಿಲಕ್ಷಣ ಆನಂದಕ್ಕೆ ಇದಕ್ಕಿಂತಲೂ ಸಮರ್ಥ ಉದಾಹರಣೆ ಬಹುಶಃ ಇಡೀ ಪ್ರಪಂಚದಲ್ಲೇ ಬೇರೊಂದು ಸಿಗಲಾರದೆನಿಸುತ್ತದೆ. ಇದಕ್ಕಿಂತಲೂ ಘೋರ ವಿಪರ್ಯಾಸವಿರುವುದು ಸಾಧ್ಯವೇ?
ಎತ್ತರ ಪ್ರದೇಶದ ಮೆಲುಹನ್ನರಾದ ದ್ರಾವಿಡರಿಂದು ಸಂಸ್ಕೃತಿ ನೆಲೆಯಲ್ಲಿ ಅಧಃಪತನಗೊಂಡಿದ್ದಾರೆ. ಆದರೆ ಅದರ ಅರಿವು? ಎಚ್ಚರವಿಲ್ಲದ ಜೀವಚ್ಛವಗಳಂತಿರುವುದು ಮಾತ್ರ ದುಪ್ಪಟ್ಟು ದುರಂತದ ಸಂಗತಿಯಾಗಿದೆ. ಅಕ್ಕಾಡಿಯನ್ನರು ಕೂಡ ತಮ್ಮ ಕ್ಯೂನಿಫಾರ್ಮ್ ಲಿಪಿಯ ಉಬ್ಬು ಕೆತ್ತನೆಯ ಶಿಲ್ಪದೊಂದಿಗಿನ ಶಾಸನದಲ್ಲಿ ಹರಪ್ಪ ನಾಗರಿಕತೆಯ ಪ್ರದೇಶವನ್ನು ಮೆಲುಹ ಅಂತಲೇ ಉಲ್ಲೇಖಿಸಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಅಮಿಷ್ ತ್ರಿಪಾಠಿ ಎಂಬ ಲೇಖಕರು ತಮ್ಮ ಶಿವ ತ್ರಿಸರಣಿಯ ಮೊದಲ ಕಾದಂಬರಿಯ ಶೀರ್ಷಿಕೆಯಲ್ಲೇ ಭಾರತವನ್ನು ‘ಮೆಲುಹ್ಹ’ ಅಂತಲೇ ಕರೆದಿರುವುದನ್ನು ಕೂಡ ನಾವಿಲ್ಲಿ ಗಮನಿಸಬಹುದಾಗಿದೆ. ಈ ಎಲ್ಲಾ ಚಾರಿತ್ರಿಕ ಸತ್ಯಗಳ ಹಿನ್ನೆಲೆಯಲ್ಲಿ ನಾವು ಹರಪ್ಪ ನಾಗರಿಕತೆಯನ್ನು ಇನ್ನು ಮುಂದಾದರೂ ಹರಪ್ಪ - ಮೆಲುಹ ನಾಗರಿಕತೆಯೆಂದೇ ಕರೆಯುವುದು ಹೆಚ್ಚು ಸೂಕ್ತ ಎಂದು ಭಾವಿಸಿದ್ದೇನೆ. ದಕ್ಷಿಣ ಭಾಗವನ್ನೂ ಒಳಗೊಂಡಂತೆ ಬಹುತೇಕ ಇಂದಿನ ಭಾರತದ ಪ್ರದೇಶವನ್ನೂ ಸೇರಿಸಿ ಈ ದೇಶಕ್ಕೆ ‘ಕೊಲೇರಿಯ’ ಅಂತಲೂ ಕರೆಯಲಾಗುತ್ತಿತ್ತಂತೆ. ಅದರ ಹಿನ್ನೆಲೆ, ಕಾರಣಗಳು ಮುಂದೆ ನಿಚ್ಚಳಗೊಳ್ಳುತ್ತವೆಯಾಗಿ ಸದ್ಯ ಇಲ್ಲಿ ವಿವರಿಸ ಹೋಗುವುದಿಲ್ಲ.
ಇಂತಹ ಭವ್ಯ ಹರಪ್ಪ - ಮೆಲುಹ ನಾಗರಿಕತೆಯ ಪರಂಪರೆಯನ್ನು ಬೆನ್ನಿಗಿರಿಸಿಕೊಂಡಿರುವ ದ್ರಾವಿಡ-ಮೆಲುಹನ್ನರು ಇಂದು ತಮ್ಮ ಬೇರುಗಳಿಂದಲೇ ಬೇರ್ಪಟ್ಟಿದ್ದಾರೆ. ತಮ್ಮ ಪೂರ್ವಿಕ ಧರ್ಮ ಮತ್ತು ಸಂಸ್ಕೃತಿ ಕಣಜದ ಮೂಲ ಕೀಲಿ ಕೈಯನ್ನೇ ಕಳೆದುಕೊಂಡಿದ್ದಾರೆ. ಪೂರ್ವಿಕ ಸಂಸ್ಕೃತಿಯ ನೆನಪುಗಳೆಲ್ಲವೂ ಮಾಸಿ ಹೋಗಿವೆ. ಅಂದರೆ ಅವರ ನೆನಪುಗಳ ಮೇಲೆ ಉದ್ದೇಶಪೂರ್ವಕವಾಗಿಯೇ ಗಾಢವಾದ ವಿಸ್ಮತಿಯನ್ನು ಹೊದಿಸಲಾಗಿದೆ.
ದ್ರಾವಿಡ - ಮೆಲಹನ್ನರ ಸಂಸ್ಕೃತಿ ಮೂಲದಿಂದಲೇ ಕುಡಿಯೊಡೆದು, ಕೊಲೇರಿಯಾ ಎಂದು ಕರೆಸಿಕೊಂಡಿದ್ದ ಈ ನೆಲದ ಸಂಸ್ಕೃತಿ ಪಲ್ಲಟದ ವೈಪರೀತ್ಯವು ಈಗ ವೈರುಧ್ಯಪೂರ್ಣ ವಾದ ಎಂತಹ ಅಪಾಯಕಾರಿ ಹಂತವನ್ನು ತಲುಪಿಬಿಟ್ಟಿದೆ ಎಂದರೆ ಸಂಸ್ಕೃತಿ ನೆಲೆಯಲ್ಲಿ ದ್ವಿತೀಯ ದರ್ಜೆಯ ಪ್ರಜೆಯಾಗಿ, ತನ್ನದೇ ನೆಲದಲ್ಲಿ ತಬ್ಬಲಿಯಂತಾಗಿರುವವರಿಗೆ ಚಾರಿತ್ರಿಕ ಸತ್ಯವನ್ನು ಲಭ್ಯ ಸಾಕ್ಷ್ಯಾಧಾರಗಳೊಂದಿಗೆ ಮಂಡಿಸಿದರೂ, ಒಪ್ಪುವ ಮಾತಂತಿರಲಿ, ಸತ್ಯಾಸತ್ಯತೆಯನ್ನರಿಯುವ ವಿವೇಕ - ಸಹನೆಯನ್ನೂ ತೋರದೆ ಆಕ್ರಮಣಕಾರಿಯಾಗಿ ವರ್ತಿಸತೊಡಗುತ್ತಾರೆ. ಅಂದರೆ ನಮ್ಮ ಮೂಲ ಸಂಸ್ಕೃತಿಯ ಚಾರಿತ್ರಿಕ ಸ್ವರೂಪವನ್ನು ಇಂದು ವಿವರಿಸಿ, ಮನಗಾಣಿಸುವ ಪ್ರಯತ್ನವೇ ಅಷ್ಟರ ಮಟ್ಟಿಗೆ ಜಟಿಲವೂ, ಸಂಕೀರ್ಣವೂ ಆಗಿ ಪರಿಣಮಿಸಿದೆ. ತಮ್ಮ ಮೂಲ ಸಂಸ್ಕೃತಿಯ ಅರಿವೇ ಇಲ್ಲದೆ, ತಮ್ಮ ಪೂರ್ವಿಕ ಪರಂಪರೆಯನ್ನೇ ದಿಕ್ಕುಗೆಡಿಸಿ ವಸಾಹತುಶಾಹಿಯಾಗಿ ವರ್ತಿಸುತ್ತಿರುವ ಸಂಸ್ಕೃತಿಯನ್ನೇ ತಮ್ಮದೆಂದು ಭ್ರಮಿಸಿಬಿಟ್ಟಿದ್ದಾರೆ! ಇದು ಈ ನೆಲದ ಹೆಚ್ಚು ಕಡಿಮೆ ಶೇ.70 ಭಾಗದ ಮುಗ್ಧ ದ್ರಾವಿಡ ಮೂಲದವರ ದಯನೀಯವೂ, ಪ್ರಜ್ಞಾಹೀನವೂ ಆದಂತಹ ಮನಃಸ್ಥಿತಿಯಾಗಿದೆ.
ದ್ರಾವಿಡರೆಂದರೆ ಕೇವಲ ದ್ರಾವಿಡ ಭಾಷೆಗಳನ್ನಾಡುತ್ತಿರುವ ದಕ್ಷಿಣ ಭಾರತದವರು ಮಾತ್ರವಲ್ಲ. ಉತ್ತರ ಭಾರತದಲ್ಲೂ ಚದುರಿದಂತೆ ಹರಡಿರುವ ಕೋಲಿ, ಕೋರಿ, ಬಿಲ್, ಮೀನ, ರಾಬರಿ ತರಹದ ಸಾವಿರಾರು ಜಾತಿಗಳಲ್ಲಿ ಹರಿದು ಹಂಚಿ ಹೋಗಿರುವವ ರೆಲ್ಲರೂ ಮೂಲತಃ ಹರಪ್ಪ -ಮೆಲುಹದ ದ್ರಾವಿಡರೇ. ಕಾಲಕ್ರಮೇಣ ಇಂಡೋ - ಆರ್ಯನ್ ಭಾಷೆಗಳ ಒತ್ತಡ - ಪ್ರಭಾವಗಳಿಂದಾಗಿ ತಮ್ಮ ಮೂಲ ಮಾತೃ ಭಾಷೆಗಳನ್ನೇ ನೀಗಿಕೊಂಡವರಿವರು. ಆದರೆ ಪ್ರತ್ಯೇಕ ಪ್ರತ್ಯೇಕ ಜಾತಿ ಗುಂಪುಗಳಾಗಿ ಛಿದ್ರೀಕರಿಸಲ್ಪಟ್ಟರೂ, ಕೆಲವು ಗುಂಪುಗಳಾದರೂ ತಮ್ಮ ಮಾತೃಭಾಷೆಯ ಸಮುದಾಯ ಕುರಿತ ಹೆಸರುಗಳನ್ನೇ ಇಂದಿಗೂ ಉಳಿಸಿಕೊಂಡಿದ್ದಾರೆ. ಉದಾಹರಣೆಗೆ ಬಿಲ್ ಬುಡಕಟ್ಟಿನ ವರು ಮೂಲತಃ ಬಿಲ್ಲಿನೊಂದಿಗೆ ಬೇಟೆಯಾಡಿ ಬದುಕುತ್ತಿದ್ದವರೇ. ಹಾಗೆಯೇ ಮೀನ ಜಾತಿಯಾಗಿ ಉಳಿದುಬಂದವರು ಮೀನು ಹಿಡಿದೇ ಬದುಕುತ್ತಿದ್ದ ಗುಂಪಿನವರು. ಇಲ್ಲಿ ಗಮನಿಸಲೇಬೇಕಾದ ಅಂಶವೇನೆಂದರೆ ಬಿಲ್ಲು ಮತ್ತು ಮೀನು ಎಂಬ ಪದಗಳು ಅಚ್ಚ ದ್ರಾವಿಡ ಭಾಷಾ ಪರಿವಾರದ ಪದಗಳೇ ಆಗಿವೆ ಎಂಬುದು. ಇಂದು ಉತ್ತರ ಭಾರತದ ಇಂಡೋ-ಆರ್ಯನ್ ಭಾಷಿಕರಾಗಿರುವ ಮೆಲುಹ ಸಮುದಾಯಗಳ ಹೆಸರು ಮಾತ್ರ ದ್ರಾವಿಡ ಭಾಷೆಯದ್ದು ಯಾಕಾಗಿವೆ ಎಂದು ಕ್ಷಣ ಯೋಚಿಸಿದರೆ ಉತ್ತರ ಸಿಗುವುದು ಕಷ್ಟವೇನಲ್ಲ. ದ್ರಾವಿಡರ ಪೂರ್ವಜರು ಝಾಗ್ರೋಸ್ ಪರ್ವತಾವಳಿ ಪ್ರದೇಶದಿಂದ ಕೃಷಿ ಜ್ಞಾನದೊಂದಿಗೆ ಬಂದಿದ್ದವರಾದರೂ, ಬೇಟೆ ಹಾಗೂ ಮೀನುಗಾರಿಕೆಯ ಕಸುಬುಗಳು ಆಗಿನ್ನೂ ತಮ್ಮ ಪ್ರಾಮುಖ್ಯತೆಯನ್ನೇನೂ ಕಳೆದುಕೊಂಡಿರಲಿಲ್ಲ. ಈ ಕಸುಬುಗಳ ಮೂಲಕವೇ ಬದುಕುತ್ತಿದ್ದವರ ಸಂಖ್ಯೆಯೇನೂ ಖಂಡಿತ ಕಡಿಮೆಯಿದ್ದಿರಲಾರದು. ಆಗ ಜಾತಿ ಪದ್ಧತಿಯೇ ಇರಲಿಲ್ಲವಾಗಿ, ಭಿನ್ನ ಕಸುಬುಗಳ ಮೂಲಕವೇ ಬದುಕುತ್ತಿದ್ದದ್ದು ನಿಜವಾದರೂ, ಬಹುಶಃ ಹರಪ್ಪ-ಮೆಲುಹನ್ನರೆಲ್ಲರೂ ಸಂಸ್ಕೃತಿ ನೆಲೆಯಿಂದ ತಮ್ಮನ್ನು ಕೋಲಿ ಜನರೆಂದೂ ಗುರುತಿಸಿಕೊಂಡಿರಬಹುದಾದ ಸಾಧ್ಯತೆ ಹೆಚ್ಚಿದೆ. ಈ ಕಾರಣದಿಂದಲೇ ಮೆಲುಹನ್ನರು ಹರಪ್ಪ ನಾಗರಿಕತೆಯ ಮೂಲ ಪ್ರದೇಶಗಳನ್ನು ತೊರೆದು ಒಳನಾಡು ಹಾಗು ಪಶ್ಚಿಮ ಕರಾವಳಿ ತೀರದುದ್ದಕ್ಕೂ ವೈದಿಕ ಪೂರ್ವದ ಕಾಲಘಟ್ಟದಲ್ಲೇ ಹಬ್ಬಿಕೊಂಡಿದ್ದರಿಂದಲೇ, ತಮ್ಮ ನೆಲವನ್ನು ಕೋಲಿಗಳ ಪ್ರದೇಶವಾದ್ದರಿಂದ ಕೊಲೇರಿಯಾ ಅಂತ ಕರೆದಿರಬಹುದಾಗಿದೆ. ಯಾಕೆಂದರೆ, 7,000ವರ್ಷಗಳ ಹಿಂದೆಯೇ ಹರಪ್ಪ - ಮೆಲುಹನ್ನ ದ್ರಾವಿಡರ ಕೆಲವು ಗುಂಪುಗಳು ದಕ್ಷಿಣ ಭಾರತದತ್ತ ವಲಸೆ ಹೊರಟು ಬಂದಿರುವುದಕ್ಕೆ ಸಾಕ್ಷಿಯಾಗಿ ಗುಂಟೂರಿನ ಗುಹಾ ಚಿತ್ರವೊಂದು ಉಳುತ್ತಿರುವುದನ್ನು ಕಂಡರಿಸಿದೆ. ಅಂದರೆ ಕೃಷಿಜ್ಞಾನವು ಹರಪ್ಪ - ಮೆಲುಹನ್ನರೊಂದಿಗೆ ಆಗ ದಕ್ಷಿಣಕ್ಕೂ ಹಬ್ಬಿತ್ತು ಎಂದಾಗುವುದಿಲ್ಲವೆ? ಆಗ ಇಲ್ಲಿದ್ದದ್ದು ಮೊದಲ ಮಾನವ ವಲಸೆಯ ಬೇಟೆಗಾರ ಗುಂಪಾಗಿದ್ದ ಆದಿಪೂರ್ವಿಕ ದಕ್ಷಿಣ ಭಾರತೀಯರು (Ancient Ancestral South Indians) ಮಾತ್ರ ತಾನೆ? Hunter-gatherers ಗುಂಪಿಗೆ ಆಗಿನ್ನೂ ಕೃಷಿ ಕುರಿತ ತಿಳುವಳಿಕೆ ಇರಲಿಲ್ಲವಲ್ಲ?
ನನ್ನಲ್ಲಿ ಯಾವ ಆಧಾರವೂ ಇಲ್ಲದ ಅನುಮಾನವೊಂದು ಹೊಸದಾಗಿ ಕಾಡತೊಡಗಿದೆ. ಅದೇನೆಂದರೆ, ವೈದಿಕಾರ್ಯರಲ್ಲಿ ಆಗಿನ್ನೂ ಮೌಖಿಕ ಪರಂಪರೆಯಲ್ಲಿದ್ದಿರಬಹುದಾದ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಆದಿಮ ಮಾನವರ ಬದುಕಿನ ಕಸುಬುಗಳಾದ ಬೇಡ ಮತ್ತು ಬೆಸ್ತಗಾರಿಕೆಯನ್ನು ಪ್ರತಿನಿಧಿಸುವವರೇ ಕವಿಗಳಾಗಿ ರಚಿಸಿದರೆಂದು ಯಾಕೆ ಚಿತ್ರಿಸಿರಬಹುದು? ನನಗೆ ತಿಳಿದಂತೆ ಪಶುಪಾಲಕರು, ಅಶ್ವ ಕಲಿಗಳೂ ಹಾಗೂ ಯಾಜ್ಞಿಕ ಯುದ್ಧೋನ್ಮಾದಿಗಳೂ ಆಗಿದ್ದ ವೈದಿಕಾರ್ಯರಲ್ಲಿ ಹರಪ್ಪ - ಮೆಲುಹನ್ನರಲ್ಲಿ ಪ್ರಧಾನ ಕಸುಬುಗಳೆಂದು ಪರಿಗಣಿಸಲ್ಪಟ್ಟಿದ್ದ ಬೇಟೆ ಹಾಗು ಮೀನುಗಾರಿಕೆ ಯ ಕಸುಬುಗಳು ಅವರ ಬದುಕುಳಿವ ದಾರಿಗಳಾಗಿ ಚಾಲ್ತಿಯಲ್ಲಿರಲಿಲ್ಲ. ಹಾಗಿದ್ದಾಗಲೂ ಯಾಕೆ ಬೇಡ - ಬೆಸ್ತರೇ ವೈದಿಕ ಮಹಾಕಾವ್ಯಗಳನ್ನು ರಚಿಸಿದ ಕವಿಗಳಾದರು? ಅದರಲ್ಲೂ ತಳ ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದ ಅವರಿಗೆ ಆ ಕಾಲದಲ್ಲಂತೂ ಖಂಡಿತ ಸಂಸ್ಕೃತ ಭಾಷೆಯಲ್ಲಿನ ಶಿಕ್ಷಣ ಲಭಿಸುವುದು ಸಾಧ್ಯವೇ ಇರಲಿಲ್ಲವಲ್ಲ? ಮುಂದೆ ಹುಟ್ಟಬಹುದಾದ ಇಂತಹ ಜಿಜ್ಞಾಸೆಗಳಿಗೆಲ್ಲ ಒಂದೇ ಉತ್ತರವೆಂಬಂತೆ ಎಲ್ಲವನ್ನೂ ಪುರಾಣೀಕರಿಸುವುದರ ಮೂಲಕವೇ ಉತ್ತರದ ಪರಿಹಾರಗಳನ್ನು ಕಂಡುಕೊಂಡಿರಬಹುದೇ? ಹೀಗೆ ಮಾಡಿದ್ದಿರ ಬಹುದಾರೂ ಯಾಕೆ ಎಂದರೆ, ಆಗ ಬಹುಸಂಖ್ಯಾತರಾಗಿದ್ದ ಬೇಡ - ಬೆಸ್ತಗಾರಿಕೆಯ ಕಸುಬಿನ ಹರಪ್ಪ - ಮೆಲಹನ್ನರನ್ನು ಅತ್ಯಂತ ಸುಲಭವಾಗಿಯೂ, ಭಾವನಾತ್ಮಕವಾಗಿಯೂ ವೈದಿಕ ತೆಕ್ಕೆಗೆ ತೆಗೆದುಕೊಂಡು ಮನಸಿಗೆ ಮೂಗುದಾರ ಹಾಕುವುದು ಸಾಧ್ಯವಿತ್ತೆಂದೇ ಗೊತ್ತಿಲ್ಲ. ಆದರೆ ಈ ಸಾಂಸ್ಕೃತಿಕ ರಾಜಕಾರಣದ ತಂತ್ರವು ನಿಜವೇ ಆಗಿದ್ದಲ್ಲಿ, ಈ ತಂತ್ರ ವೈದಿಕರ ನಿರೀಕ್ಷೆಗೂ ಮೀರಿ ಫಲಿಸಿದೆಯೆಂದೇ ಹೇಳಬಹುದು. ಈ ಅನುಮಾನವನ್ನು ಪುಷ್ಟೀಕರಿಸುವಂತಹ ಕೆಲವಂಶಗಳೂ ಇಲ್ಲಿ ಪ್ರಸ್ತಾಪಿತಗೊಳ್ಳಬೇಕಿದೆ. ವೈದಿಕಾರ್ಯರು ಕುಶಲಿ ಮೀನುಗಾರಿಕೆಯ ಕಸುಬಿನವರಾಗಿದ್ದಲ್ಲಿ ಅವರಿಗೆ ಖಂಡಿತ ಉಪ್ಪಿನ ಪರಿಚಯವಿ ರುತ್ತಿತ್ತು. ಆದರೆ ಅವರು ಭಾರತಕ್ಕೆ ಬಂದ ನಂತರವೇ ಅವರಿಗೆ ಪಾಕಶಾಸ್ತ್ರದಲ್ಲಿ ಲವಣದ ಮಹತ್ವ ಅರಿವಾದದ್ದು! ಎರಡನೆಯದಾಗಿ ಆಸ್ಕೋ ಪರ್ಪೋಲ ಅವರು ಹರಪ್ಪ -ಮೆಲುಹದಲ್ಲಿರುವ ಅತಿ ಹೆಚ್ಚಿನ ಮೀನಿನ ಮುದ್ರೆ, ಚಿತ್ರಕಲೆಗಳನ್ನು ಗಮನಿಸಿ, ಬಹುಶಃ ‘ಮೀನು ಮೆಲುಹನ್ನರಲ್ಲಿ ಪೂಜನೀಯ ಸ್ಥಾನದಲ್ಲಿನ ದೈವವಾಗಿದ್ದಿರಬಹುದು’ ಎಂದಿದ್ದಾರೆ. ಮುಂದುವರಿದು, ಬಹುಶಃ ‘ದ್ರಾವಿಡರ ಈ ಪ್ರಭಾವದ ಕಾರಣದಿಂದಲೇ ವೈದಿಕರ ವಿಷ್ಣುವಿನ ಮೊದಲ ಅವತಾರ ಮತ್ಸ್ಯಾವತಾರವಾದದ್ದು’ ಎಂದು ಅಭಿಪ್ರಾಯ ಪಡುತ್ತಾರೆ. ಮೂರನೆಯದಾಗಿ ವೈದಿಕಾರ್ಯರಿಗೆ ಸಾಕುಪ್ರಾಣಿಗಳಾಗಿದ್ದ ಕುದುರೆ ಹಾಗು ಹಸುಗಳಿಂದಲೇ ವಿಪುಲವಾದಷ್ಟು ಮಾಂಸ ದೊರೆಯುತ್ತಿತ್ತಾಗಿ, ಅವರಿಗೆ ಇನ್ನಿತರ ಪ್ರಾಣಿಗಳನ್ನು ಬೇಟೆಯಾಡುವುದು ಆದ್ಯತೆಯೇ ಆಗಿರಲಿಲ್ಲ. ಯುರೇಷಿಯಾದ ಯಾಮ್ನಾಯ ಸಂಸ್ಕೃತಿಯಿಂದ ಮೊದಲುಗೊಂಡು, ಬಾಕ್ಟ್ರಿಯಾ ಮಾರ್ಜಿಯಾನ ಆರ್ಕಿಯಾಲಾಜಿಕಲ್ ಕಾಂಪ್ಲೆಕ್ಸ್‌ನ (BMAC) ವರೆಗೂ ತಿಂದುಳಿಸಿದ ಕುದುರೆ ಹಾಗು ಹಸುಗಳ ಮೂಳೆಗಳು ಭೂ ಉತ್ಖನನದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲೇ ದೊರೆತಿರುವುದು ಈ ಮಾತಿಗೆ ಪೂರಕವೆಂಬಂತೆಯೇ ಇದೆ. ಜೊತೆಗೆ ಋಗ್ವೇದದಲ್ಲೇ ಗೋಮಾಂಸ ಭಕ್ಷಣೆಯ ಕುರಿತು ವಿಪುಲ ಮಾಹಿತಿಗಳಿರುವುದರ ಬಗ್ಗೆ ‘ಧರ್ಮ ಸಂಕಟ ಸೃಷ್ಟಿಸಿರುವ ಮಾದಕ ಸೋಮ’ ಎಂಬ ನನ್ನ ಲೇಖನದಲ್ಲಿ ಆಧಾರ ಸಮೇತ ವಿವರಿಸಿದ್ದೇನೆ. ಹೀಗೆ ಬೇಟೆ ಮತ್ತು ಮೀನುಗಾರಿಕೆಗಳು ವೈದಿಕಾರ್ಯರ ಪಾಲಿನ ಬದುಕುಳಿವ ಪ್ರಧಾನ ಕಸುಬುಗಳೇ ಆಗಿಲ್ಲದಿದ್ದಾಗಲೂ, ಯಾಕೆ ಅವರ ಮಹತ್ವದ ಎರಡೂ ಮಹಾಕಾವ್ಯಗಳ ಕವಿಗಳು ಬೇಡ ಮತ್ತು ಬೆಸ್ತರೇ ಆದರು ಎಂಬುದಕ್ಕೆ ಬೇರೆ ಸಮರ್ಥ ಉತ್ತರವಾದರೂ ಎಲ್ಲಿದೆ ಎಂಬುದು ನನಗಂತೂ ತಿಳಿದಿಲ್ಲ. ಇದಕ್ಕೆ ಪ್ರಾಜ್ಞರೇ ಉತ್ತರಿಸಬೇಕು.
ಮೀನ, ಬಿಲ್ ಎಂದು ಸಮುದಾಯದ ಹೆಸರನ್ನಾಗಿರಿಸಿಕೊಂಡಿರುವುದರ ಹಿನ್ನೆಲೆ ಯನ್ನು ಅರ್ಥಮಾಡಿಕೊಳ್ಳುವಲ್ಲಿ ಯಾವ ತೊಡಕೂ ಇಲ್ಲವೆನಿಸುತ್ತದೆ. ಆದರೆ ಅದೇ ಮೀನುಗಾರಿಕೆಯ ಕಸುಬಿನವರೇ ಆದರೂ ಗಣನೀಯ ಪ್ರಮಾಣದ ಗುಂಪೊಂದು ಮಾತ್ರ ತಮ್ಮನ್ನು ಕೋಲಿಗಳೆಂದು ಯಾಕೆ ಗುರುತಿಸಿಕೊಂಡರು? ಏನಿದರ ಹಿನ್ನೆಲೆ? ಬಹುಶಃ ಈಗ ಮೀನ ಜಾತಿಯವರೆಂದು ಗುರುತಿಸಿಕೊಂಡಿರುವವರು ಕೂಡ ಹರಪ್ಪ - ಮೆಲುಹದಲ್ಲಿದ್ದಾಗ ಕೋಲಿಗಳೇ ಆಗಿದ್ದಿರಬಹುದೇ? ಅದಷ್ಟೇ ಅಲ್ಲದೆ ಹರಪ್ಪ - ಮೆಲುಹನ್ನ ದ್ರಾವಿಡರೆಲ್ಲರೂ ಆಗ ಕೋಲಿಗಳೇ ಆಗಿದ್ದರೇ? ಆಗಿದ್ದಿರಬಹುದಾದ ಸಾಧ್ಯತೆಯೇ ಹೆಚ್ಚಿದೆ ಅನಿಸುತ್ತಿದೆ. ಯಾಕೆಂದರೆ ಈಗ ಜಾತಿ ಸೂಚಕ ಪದವಾಗಿರುವ ಕೋಲಿ ಎಂಬುದರಲ್ಲಿ ಬೆಸ್ತಗಾರಿಕೆಯ ಯಾವ ಅರ್ಥಗಳೂ ಅಡಗಿಲ್ಲ. ಬದಲಾಗಿ ಪರಂಪರಾಗತವಾಗಿ ಹರಿದು ಬಂದ ಹರಪ್ಪ - ಮೆಲುಹನ್ನ ದ್ರಾವಿಡರೆಲ್ಲರ ಧರ್ಮ - ಸಂಸ್ಕೃತಿಯ, ಮೂಲ ಚಹರೆಯ ಗೂಡಾರ್ಥವೇ ಅಲ್ಲಿ ಅಡಗಿದೆ. ನಾವು ಮರೆತಿರುವುದು ಮತ್ತು ನೆನಪಿಸಿಕೊಳ್ಳಬೇಕಾದ್ದು ಅದನ್ನೇ.
ಜಿಡ್ಡುಗಟ್ಟಿ ಹೊಗಿರುವ ವಿದ್ವಾಂಸರು ‘ಕೋಲಿ’ ಪದದ ನಿಷ್ಪತ್ತಿ ಮೂಲ ಹಾಗೂ ಅರ್ಥ ವ್ಯಾಖ್ಯಾನಗಳನ್ನು ಹೀಗೆ ನೀಡುತ್ತಾರೆ. ಸಂಸ್ಕೃತ ಭಾಷೆಯ ‘ಕುಲ’ ಎಂಬ ಪದದಿಂದಲೇ ಕೋಲಿ ಎಂಬುದು ನಿಷ್ಪನ್ನಗೊಂಡಿದೆ ಎಂಬುದು ಕೆಲವರ ವಾದ. ಆದರೆ ಸಂಸ್ಕೃತ ಭಾಷೆ ಹರಪ್ಪ- ಮೆಲುಹನ್ನರ ಕಾಲದಲ್ಲಿ ಎಲ್ಲಿತ್ತು?! ಈ ನೆಲದ ಪೂರ್ವಿಕತೆಯ ಎಲ್ಲ ಅಂಶಗಳನ್ನೂ ಸಂಸ್ಕೃತದಿಂದಲೇ ನಿರ್ವಚಿಸುವ ಈ ಅಂಟು ಜಾಡ್ಯ ಇನ್ನಾದರೂ ತೊಲಗುವುದೇ? ಅನೇಕ ಪ್ರಗತಿಪರ ಚಿಂತಕರನ್ನೂ ಈ ವ್ಯಾಧಿ ಬಲಿ ತೆಗೆದುಕೊಂಡಿರುವುದನ್ನು ನಾನು ಬಲೆ.್ಲ ಮತ್ತೊಬ್ಬ ವಿದ್ವಾಂಸರು ಕೂಲಿ ಮಾಡುವ ಜನರು ಅವರಾದ್ದರಿಂದಲೇ ಕೋಲಿ ಎಂಬ ಪದ ರೂಪುಗೊಂಡಿದೆ ಎಂದಿದ್ದಾರೆ. ಆದರೆ ಹರಪ್ಪ -ಮೆಲುಹದಲ್ಲಿನ ಕೋಲಿ ಪದದ ಮೂಲ ಅರ್ಥವನ್ನು ತಲೆತಲೆಮಾರುಗಳ ನೆನಪಿನಿಂದಲೇ ತಮಿಳುನಾಡಿನವರೆಗೂ ಕೊಂಡೊಯ್ದು, ಸಂಗಂ ಸಾಹಿತ್ಯದಲ್ಲಿ ಅದನ್ನು ದಾಖಲಿಸಿದವರಿಗೆ ನಾನಂತೂ ಮೆಚ್ಚುಗೆ ಸೂಚಿಸದೆ ಇರಲಾರೆ. ಸಂಗಂ ಸಾಹಿತ್ಯದ ‘ಪತ್ತು ಪಾಟ್ಟು’ ವಿನಲ್ಲಿ ಕೋಲಿ ಅಂದರೆ ‘ಹೊರಗೆ ಹೂವರಳದೆ ಹಣ್ಣು ಬಿಡುವ ಮರ’ / ‘ಪೂವತ್ತು ಕಾಯ್ಕುಂ ಮರಂ’ (Tree Bearing Fruit without outwordly blossoming) ಎಂದು ಸ್ಪಷ್ಟವಾಗಿ ವಿವರಿಸಲಾಗಿದೆ. ಅಂದರೆ, ಅತ್ತಿ ಮರ, ಅಂಜೂರ, ಅರಳಿ - ಅಶ್ವತ್ಥ ಹಾಗು ಆಲದ ಮರಗಳೆಂಬ ಅರ್ಥವೇ ತಾನೆ? ‘ಆಲಕ್ಕೆ ಹೂವಿಲ್ಲ......’ ಎಂಬ ಕನ್ನಡ ಜಾನಪದ ತ್ರಿಪದಿಯೂ ಇಲ್ಲಿ ನೆನಪಾಗುತ್ತಿದೆ.
ದ್ರಾವಿಡರಿಗೂ ಈ ಮರಗಳಿಗೂ ಯಾವ ಸಂಬಂಧ? ದ್ರಾವಿಡರ ಸಂಸ್ಕೃತಿಯನ್ನು ಈ ಮರಗಳು ಹೇಗೆ ಪ್ರತಿನಿಧಿಸುತ್ತವೆ ಎಂಬ ಪ್ರಶ್ನೆಗಳೇಳುವುದು ಸಹಜ. ಅದಕ್ಕೆ ನಾವು ಆಫ್ರಿಕಾ ಮೂಲದ ಪುರಾಣದತ್ತಲೇ ನೋಡಬೇಕಿದೆ. ಆಫ್ರಿಕಾದಿಂದ ಹೊರಟ ಎರಡನೆಯ ವಲಸೆ ಗುಂಪಲ್ಲಿ ಇಂದು ದ್ರಾವಿಡರಾಗಿರುವವರ ಪೂರ್ವಜರೂ ಇದ್ದರು. 45-50 ಸಾವಿರ ವರ್ಷಗಳ ಹಿಂದಿನ ಈ ವಲಸೆಯ ದ್ರಾವಿಡ ಪೂರ್ವಿಕರೆಂದೆನಿಸಿಕೊಂಡವರ ಗುಂಪು ಮೊದಲು ಮೆಡಿಟರೇನಿಯನ್ ಪ್ರದೇಶದಲ್ಲಿದ್ದು, 12 ಸಾವಿರ ವರ್ಷಗಳ ಆಸುಪಾಸಲ್ಲಿ ಇಂದಿನ ಝಾಗ್ರೋಸ್ ಪರ್ವತಾವಳಿ ಪ್ರದೇಶದಲ್ಲಿ ನೆಲಸಿದರು. ಅಲ್ಲಿ ಪ್ರಾರಂಭವಾಗಿದ್ದ ಕೃಷಿಯ ಜ್ಞಾನದೊಂದಿಗೆ ಆ ಗುಂಪು ಮೆಹರ್‌ಘರ್ ಮೂಲಕ ಹರಪ್ಪ - ಮೆಲುಹ ಪ್ರದೇಶಕ್ಕೆ ಬಂದು ಹರಪ್ಪ ನಾಗರಿಕತೆಯನ್ನು ರೂಪಿಸಿದರು. ಪೂರ್ವ ಆಫ್ರೀಕಾದಿಂದ ಹರಪ್ಪ ನಾಗರಿಕತೆಯವರೆಗು ಅವರ ನೆನಪುಗಳ ಬಂಡಿಯೇರಿ ಬಂದ ಸಮುದಾಯ ಮೂಲದ ಪುರಾಣದ ಪರಿಕಲ್ಪನೆ ಹರಪ್ಪ - ಮೆಲುಹದಲ್ಲಿ ಮೊದಲ ಬಾರಿಗೆ ಅಭಿವ್ಯಕ್ತಗೊಂಡಂತಿದೆ. ಈ ಪುರಾಣವು ಕೇವಲ ಪುರಾಣವೂ ಆಗಿರಬಹುದಾದಂತೆಯೇ, ಚಾರಿತ್ರಿಕ ಎಳೆಗಳೂ ಬೆಸೆದುಕೊಂಡಿರಬಹುದು. ಅದರ ವಿವರಗಳನ್ನೀಗ ಗಮನಿಸುವ.
ಪೂರ್ವ ಆಫ್ರಿಕಾದ ಕೀನ್ಯಾ ಪರ್ವತದ ಸುತ್ತಮುತ್ತ ಕಿಕಿಯೂ, ಕಂಬ (ಅಕಂಬ), ಮೇರು, ಎಂಬು, ಮಸಾಯಿ, ಬಂಟು ಮತ್ತು ಹಡ್ಜಬೆ ಮುಂತಾದ ಬುಡಕಟ್ಟಿನ ಜನ ನೆಲೆಸಿದ್ದಾರೆ. (ಚಿತ್ರ 3) ಬಹುತೇಕ ಇವರೆಲ್ಲರ ಸೃಷ್ಟಿಮೂಲ ಪುರಾಣಗಳಲ್ಲಿ ಪ್ರಧಾನವಾಗಿ ಹೆಸರಿಸಲ್ಪಡುವ ಪೂರ್ವಿಕ ಎನ್‌ಗಾಯ್ (NGAI). ಕಪ್ಪು - ಬಿಳುಪಿನ ಉಷ್ಟ್ರಪಕ್ಷಿಯೇ ಈ ಎನ್‌ಗಾಯ್. ಸೃಷ್ಟಿಮೂಲ ಪೂರ್ವಿಕ ಪುರುಷನಾದ ಮುರುಂಗು ನಿರಾಕಾರನಾಗಿ ನೆಲೆಸಿರುವ ಕೀನ್ಯಾ ಪರ್ವತವು ಮಂಜಿನಿಂದಾವೃತವಾಗಿದ್ದಾಗ ಉಷ್ಟ್ರಪಕ್ಷಿಯಂತೆಯೇ ಕಾಣಿಸುವುದರಿಂದಾಗಿ ಆತನಿಗೆ ಈ ವಿಶೇಷಣವು ಸಂದಿದೆ. ಉಳಿದಂತೆ ಬಂಟು ಮೂಲದ ಬುಡಕಟ್ಟುಗಳೆಲ್ಲವೂ ಮುರುಂಗುವನ್ನು ಮುಲುಂಗು ಅಂತ ಕರೆಯುವುದುಂಟು. ಈ ಮುರುಂಗುವೇ ಮೊದಲ ಪುರುಷ, ಕಿಕಿಯೂ ಹಾಗೂ ಮೊದಲ ಹೆಣ್ಣು ಮುಂಬಿಯನ್ನು ಸೃಷ್ಟಿಸಿದ್ದು. ಇವರಿಗೆ ಒಂಭತ್ತು ಮಂದಿ ಮಕ್ಕಳಾದರೂ ಕಾರಣಾಂತರಗಳಿಂದ ಏಳು ಮಂದಿ ಮಾತ್ರ ಉಳಿಯುತ್ತಾರೆ. ಇವರೇ ಜಗತ್ತಿನ ಮೊಟ್ಟಮೊದಲ Seven Sisters ಜಗತ್ತಿನ ಅತ್ಯಂತ ಪ್ರಾಚೀನವಾದ ಕತೆ ಕೂಡ ಈ ಏಳು ಮಂದಿ ಅಕ್ಕತಂಗಿಯರದ್ದೇ ಎಂದು ಹೇಳುವ ವಿದ್ವಾಂಸರು, ಬಹುಶಃ ಲಕ್ಷ ವರ್ಷಗಳಿಂದಲೂ ಈ ಕತೆ ಮೌಖಿಕ ಪರಂಪರೆಯಲ್ಲಿ ಪುನರಚ್ಚಾರಗೊಳ್ಳುತ್ತಲೇ ಬಂದಿದೆ ಎಂದೂ ತಿಳಿಸಿದ್ದಾರೆ. ಹರಪ್ಪಾದ ಮೆಲುಹ ದ್ರಾವಿಡರ ಪೂರ್ವಜರಾಗಿದ್ದರೇ ಈ ಪುರಾಣ ಮೂಲದ ಯಾವುದಾದರೂ ಬುಡಕಟ್ಟಿಗೆ ಸೇರಿದ್ದವರಾಗಿರಬಹುದು. ಯಾಕೆಂದರೆ ಈ ಪುರಾಣಮೂಲದ ಪೂರ್ವಜ ವ್ಯಕ್ತಿಗಳೆಲ್ಲರೂ ಹರಪ್ಪ - ಮೆಲುಹದಲ್ಲಿ ತಮ್ಮ ಸ್ಪಷ್ಟ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿರುವರಲ್ಲದೆ, ನಂತರ ಈ ಮೆಲುಹನ್ ದ್ರಾವಿಡರು ಹೋಗಿ ನೆಲೆಸಿದೆಡೆಗಳಲ್ಲೆಲ್ಲಾ ಮರುಸ್ಥಾಪಿತಗೊಂಡಿದ್ದಾರೆ. ಹೆಸರುಗಳು ಕೂಡ ಬಹುತೇಕ ಮೂಲ ಪುರಾಣದಲ್ಲಿರುವಂತೆಯೇ ಇವೆ. ಈ ಮುಂಬಿ ತಾಯಿಯೇ ಪೂರ್ವ ಆಫ್ರಿಕನ್ ಬುಡಕಟ್ಟುಗಳೆಲ್ಲರ ಮೂಲ ಮಹಾಮಾತೆ. ಆಫ್ರಿಕನ್ ಬುಡಕಟ್ಟು ಸಮಾಜ ಮಾತೃಮೂಲೀಯ ಸಮಾಜವಾದ್ದರಿಂದ ಮುಂಬಿ ಜೊತೆಗೆ ಆಕೆಯ ಏಳು ಮಂದಿ ಹೆಣ್ಣು ಮಕ್ಕಳ ಕತೆಯೇ ಪ್ರಧಾನವಾಗಿ ಹರಿದುಬಂದಿದೆ. ಮೂಲ ಸೃಷ್ಟಿ ಪೂರ್ವಜನಾದ್ದರಿಂದ ಮುರುಂಗುವಿನ ನೆನಪೂ ಹರಿದು ಬಂದಿದೆ. (ಚಿತ್ರ 4)
ಈ ಮುರುಂಗುವೇ ದ್ರಾವಿಡರ ಮುರುಗನ್. ಈ ಮುರುಗ ಹರಪ್ಪ - ಮೆಲುಹ ನಾಗರಿಕತೆಯಲ್ಲೂ ಇದ್ದನೆಂಬ ಅಂಶವನ್ನು ತಮಿಳಿನ ವಿದ್ವಾಂಸರಾಗಿದ್ದ ಐರಾವತಂ ಮಹದೇವನ್ ಅವರು ಹರಪ್ಪ ಲಿಪಿ - ಕೆತ್ತನೆಗಳ ಅಧ್ಯಯನ ಹಾಗು ಸಾಕ್ಷ್ಯಾಧಾರಗಳ ಮೂಲಕವೇ ಸಾಬೀತು ಪಡಿಸಿದ್ದಾರೆ. (ಚಿತ್ರ5) ಅಕಸ್ಮಾತ್ ಹರಪ್ಪಾದಲ್ಲಿ ಮುರುಗನಿದ್ದಿರಲಿಲ್ಲವೆಂದಾದಲ್ಲಿ, ಆತನಿಂದು ತಮಿಳರ ಆರಾಧ್ಯ ಪೂರ್ವಿಕನಾಗಿಯೂ ಕಾಣಿಸಿಕೊಳ್ಳಲು ಸಾಧ್ಯವಿರುತ್ತಿರಲೇ ಇಲ್ಲವಲ್ಲ? ಈ ಮುರುಗನನ್ನು ಕಂಡೆ ಯಕ, ಸೆಯಾನ್, ಮುರುಗ, ಇಗ್ಗುತಪ್ಪ ಹಾಗು ಸುಬ್ರಹ್ಮಣ್ಯ (ಸಂಸ್ಕೃತದ ನಾಮ ಹೇಗೆ ಬಂತೋ?!) ಎಂದೆಲ್ಲಾ ಭಿನ್ನ ಹೆಸರುಗಳಿಂದ ದಕ್ಷಿಣದಲ್ಲಿ ಕರೆಯುವುದುಂಟು. ಮುರುಗನೊಂದಿಗೆ ಸ್ಕಂದ, ನೈಗಮೇಷ, ಶಾಖ, ವಿಶಾಖ, ಕುಮಾರ, ಕಾರ್ತಿಕೇಯ, ಗುಹ ಹಾಗು ಷಣ್ಮುಗ (ಆರ್ಮುಗ)ರಿಗೆ ಯಾವ ಬಾದರಾಯಣ ಸಂಬಂಧವೂ ಇಲ್ಲ. ವಂಶವಾಹಿ ಸಂಬಂಧದ ಮಾತಂತೂ ದೂರವೇ ಉಳಿಯಿತು ಬಿಡಿ.
ಇದೇ ನಿರಾಕಾರ ಮುರುಗನ ಕೋಯಿಲ್ ಶ್ರೀಲಂಕಾದ ಕತರಗಾಮದಲ್ಲೂ ಇದ್ದೂ, ಅಲ್ಲೂ ಆತ ನಿರಾಕಾರನೇ ಆಗಿ ಉಳಿದಿದ್ದಾನೆ. ಅಲ್ಲಿನ ಮೂಲ ನಿವಾಸಿಗಳಾಗಿರುವ ವೆಡ್ಡಾಗಳು ಈ ಕಂಡೆ ಯಕನ ಮೂಲ ಒಕ್ಕಲುಗಳು. ವೆಡ್ಡಾಗಳು 30-55 ಸಾವಿರ ವರ್ಷಗಳ ಹಿಂದೆಂದೋ ಭಾರತ ಉಪಖ ಂಡವನ್ನು ತೊರೆದು ಶ್ರೀಲಂಕಾಗೆ ಬಂದು ನೆಲೆಸಿದವರು. ಅವರ ಪುರಾಣದ ಪ್ರಕಾರ ಅವರ ನಾಯಕನ ಮಗಳಾದ ವಳ್ಳಿಯೇ ಮುರುಗನ ಏಕೈಕ ಹೆಂಡತಿ. ಮಲೇಷಿಯಾದಲ್ಲಿನ ಮೂಲ ನಿವಾಸಿಗಳು ಈ ವೆಡ್ಡಾಗಳ ನಿಕಟ ಸಂಬಂಧಿಗಳೆಂದು ವಂಶವಾಹಿ ತಜ್ಞರೇ ನಿರ್ಧರಿಸಿದ್ದಾರೆ.
ಆಫ್ರಿಕಾದಿಂದ ಹೊರಟ ಮೊದಲ ವಲಸೆಯ ತಂಡ ಅಂತಿಮವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಗೊಂಡರಷ್ಟೇ. ಈ ಮುರುಂಗು ಅಲ್ಲಿನ ಮೂಲ ನಿವಾಸಿಗಳಲ್ಲೂ ವರ-ಮುರುಂಗು-ಂಡಿ, ಮಮರಗನ್ ಆಗಿ ಉಳಿದಿದ್ದಾನೆ. ಏಳು ಮಂದಿ ಅಕ್ಕತಂಗಿಯರ ಪುರಾಣ ಕತೆಯೂ ಭಿನ್ನಭಿನ್ನ ರೂಪಗಳಲ್ಲಿ ಆಸ್ಟ್ರೇಲಿಯನ್ ಮೂಲನಿವಾಸಿಗಳಲ್ಲಿ ಇಂದಿಗೂ ಉಳಿದು ಬಂದಿದೆ.
ಉಳಿದಂತೆ ಬಂಟು ಬುಡಕಟ್ಟಿನವರು ಮುಂಬಿಯನ್ನು ಮುಂಬ ಅಂತಲೇ ಕರೆಯುತ್ತಾರೆ. ಇಲ್ಲೂ ಆ ಉಚ್ಚಾರಣೆಯೇ ಉಳಿದು ಬಂದಿದೆ. ಮುರುಂಗು, ಮುಂಬಾಳನ್ನು ಅತ್ತಿ ಮರದ ವನದಲ್ಲಿರುವಂತೆ ಸೃಷ್ಟಿಸಿರುತ್ತಾನೆ. ಮೊದಲ ಪುರುಷ ಕಿಕಿಯೂ, ವನಕ್ಕೆ ಬಂದು ನೋಡಿದಾಗ ಮುಂಬಾ ಅತ್ತಿ ಮರವೊಂದರಲ್ಲಿದ್ದಳಂತೆ. ಹೀಗಾಗಿ ಪೂರ್ವ ಆಫ್ರಿಕನ್ ಬುಡಕಟ್ಟಿನವರಿಗೆಲ್ಲ ಅತ್ತಿ ಮರ ಅತ್ಯಂತ ಪವಿತ್ರವೂ, ಪೂಜನೀಯವಾದದ್ದೂ ಆಗಿದೆ. ಅತ್ತಿ ಮರ ಸಿಗದಿದ್ದಾಗ ಅದೇ ಜಾತಿಯ ಅಂಜೂರದ ಮರ ಸಿಕ್ಕರೂ ಅವರು ಆ ಮರದಡಿಯಲ್ಲೇ ಪೂಜಾ ಆಚರಣೆಗಳನ್ನು ನಡೆಸುತ್ತಾರಂತೆ. ಬಹುಶಃ ಹರಪ್ಪ - ಮೆಲುಹನ್ನರಿಗೆ ಈ ಎರಡೂ ಮರಗಳು ಕಾಣಸಿಗಲಿಲ್ಲವೇನೋ, ಅವರು ಅದೇ ಸಸ್ಯಜಾತಿಯ ಅರಳಿ - ಅಶ್ವತ್ಥ (Pipal tree) ವೃಕ್ಷದಲ್ಲಿ ಮುಂಬಾಳಿರುವಂತೆ ತಮ್ಮ ಉಬ್ಬುಕೆತ್ತನೆಯಲ್ಲಿ ಚಿತ್ರಿಸಿದ್ದಾರೆ. (ಚಿತ್ರ 6) ಈ ಕೆತ್ತನೆಯಲ್ಲಿ ಮುಂಬಾಳ ಮುಂದೆ ಕೋಲಿ ದ್ರಾವಿಡ ಭಕ್ತನೊಬ್ಬ ಬಲಿಗಾಗಿ ತಂದ ಮೇಕೆಯೊಂದಿಗೆ ಮೊಣಕಾಲುಗಳ ಮೇಲೆ ಕೂತಿರುವಂತೆಯೂ, ತಳಭಾಗದಲ್ಲಿ ಮುಂಬಾಳ ಏಳು ಮಂದಿ ಹೆಣ್ಣು ಮಕ್ಕಳು ನಿಂತಿರುವಂತೆಯೂ ಚಿತ್ರಿಸಲ್ಪಟ್ಟಿದೆ. ಮೀನಿನ ಚಿತ್ರವನ್ನೂ ಮೂಲೆಯೊಂದರಲ್ಲಿ ಬಿಡಿಸಲಾಗಿದೆ. ಆದರೆ, ಈಕೆಯೇ ಮುಂಬ ಎಂದು ಖಚಿತವಾಗಿ ನಂಬುವುದು ಹೇಗೆ? ನಾನಂತೂ ನಂಬಿದ್ದೇನೆ. ಯಾಕೆಂದರೆ ಈಕೆಯೇ ಕೋಲಿ ಮರದವ್ವ. ಹಾಗಾಗಿಯೇ ಹರಪ್ಪದಿಂದ ರಾಜಸ್ಥಾನದತ್ತ ವಲಸೆ ಹೊರಟ ಕೋಲಿ ದ್ರಾವಿಡರು ಇಂದಿಗೂ ಅಲ್ಲಿ ಈಕೆಯನ್ನು ‘ಕೊಲೇರಿಯಾ ರೈ ಮಾತಾ’ ಎಂದು ಪೂಜಿಸುತ್ತಿದ್ದಾರೆ. (ಚಿತ್ರ 7) ಜಾತ್ರೆಗಳೂ ನಡೆಯುತ್ತವೆ. ಜೊತೆಗೆ ಈ ಕೊಲೇರಿಯಾ ರೈ ಮಾತೆಯೊಂದಿಗೆ ಏಳು ಮಂದಿ ಅಕ್ಕತಂಗಿಯರೂ ಹಾಗೂ ಮುರುಂಗುವಿನ ಕೆತ್ತನೆಯೂ ಕಾಣಸಿಗುತ್ತದೆ. ಕೋಲಿ ಮರದವ್ವಳಾದ ಈ ಕೊಲೇರಿಯಾ ಮಾತೆಯ ನೆನಪಲ್ಲೇ ವೈದಿಕ ಪೂರ್ವ ಕಾಲದಲ್ಲಿ ಈ ದೇಶವನ್ನು ಹರಪ್ಪ ಕೋಲಿಗಳು ‘ಕೊಲೇರಿಯಾ ದೇಶ’ ಎಂದು ಕರೆಯುವಂತಾದದ್ದು. ಈಗಲೂ ಈ ದೇಶದಲ್ಲಿ ಕೊ, ಕೋಲದಿಂದ ಪ್ರಾರಂಭವಾಗುವ ಸ್ಥಳನಾಮಗಳು, ನದಿ ಸರೋವರಗಳ ಸಂಖ್ಯೆ 1,400ಕ್ಕೂ ಹೆಚ್ಚಿದೆಯೆಂಬುದು ಸಮೀಕ್ಷೆಯೊಂದರ ಅಂದಾಜು.
ಗುಜರಾತಿನ ದಕ್ಷಿಣ ಭಾಗದವರೆವಿಗೂ ಹರಪ್ಪ - ಮೆಲುಹ ನಾಗರಿಕತೆ ಹಬ್ಬಿತ್ತಲ್ಲವೇ? ದೋಲಾವೀರ್‌ನೊಂದಿಗೆ ಲೋಥಾಲ್ ಬಗ್ಗೆಯೂ ನಮಗೆ ಗೊತ್ತೇ ಇದೆ. ಹೀಗಾಗಿ ಸಹಜವಾಗಿಯೇ ಅಲ್ಲೂ ಮುಂಬ ನೆಲೆಗೊಂಡಿದ್ದೂ ಇಂದಿಗೂ ಪೂಜಾರ್ಹಳಾಗಿದ್ದಾಳೆ. ಜೊತೆಗೆ ‘ಕೊಡಿಯಾರ್’ ಎಂಬ ಏಳು ಮಂದಿ ಅಕ್ಕತಂಗಿಯರೂ ಅಲ್ಲಿದ್ದಾರೆ. ರಾಜಸ್ಥಾನದಲ್ಲಿಯೂ ಈ ಕೊಡಿಯಾರ್ ಅಕ್ಕತಂಗಿಯರ ಆರಾಧನೆ ಉಳಿದು ಬಂದಿದೆ. 12ನೇ ಶತಮಾನದಲ್ಲಿ ಗುಜರಾತಿನಿಂದ ಆಗಿನ ಏಳು ದ್ವೀಪಗಳಾಗಿದ್ದ ಮುಂಬೈಗೆ ಕೋಲಿ ಸಮುದಾಯದವರು ವಲಸೆ ಹೊರಟು ಬಂದು ನೆಲೆಸುತ್ತಾರೆ. ತಮ್ಮೊಂದಿಗೆ ಮುಂಬ ಹಾಗೂ ಆಕೆಯ ಏಳು ಮಂದಿ ಅಕ್ಕ ತಂಗಿಯರ ಸಂಸ್ಕೃತಿ ನೆನಪನ್ನೂ ಹೊತ್ತು ತರುತ್ತಾರೆ. ಈ ‘ಮುಂಬ ಆಯಿಯ’ ಹೆಸರೇ ‘ಮುಂಬಯಿ’ ಅಂತ ನಿಂತದ್ದು. (ಚಿತ್ರ 8) ಇಂದಿಗೂ ಮುಂಬಯಿಯಲ್ಲಿ ಮುಂಬ ತಾಯಿಯ ದೇವಾಲಯದೊಂದಿಗೆ ಬೇರೆ ಬೇರೆಡೆಗಳಲ್ಲಿ ಏಳು ಮಂದಿ ಅಕ್ಕತಂಗಿಯರ ಗುಡಿಗಳೂ ಇವೆ. ಥಾಣೆ ಎಂಬಲ್ಲಿ ಬೆಟ್ಟದ ಮೇಲೆ ಮುಂಬ್ರಾ ತಾಯಿಯ ದೇವಾಲಯವಿದ್ದು ಅಲ್ಲಿ ಮುಂಬ ತಾಯಿಯೊಂದಿಗೆ ಅಪರೂಪಕ್ಕೆಂಬಂತೆ ಆಕೆಯ ಒಂಭತ್ತು ಮಂದಿ ಹೆಣು ಮಕ್ಕಳನ್ನು ಕಡೆದಿರಿಸಲಾಗಿದೆ. (ಚಿತ್ರ 9) ಒಟ್ಟು ಹತ್ತು ತಲೆಗಳ ಕೆತ್ತನೆಯಿರುವ ಈ ಮುಂಬ್ರಾ ತಾಯಿಯನ್ನ ನವದುರ್ಗಿ ಎಂದು ಮಾರ್ಪಡಿಸಲಾಗಿದೆ! ಮಂಗಳೂರಿನ ಬೆಣ್ಣೆಕುದ್ರು ಎಂಬಲ್ಲಿ ‘ಕುಲಮಹಾಸ್ತ್ರೀ’ ಎಂಬ ಹೆಸರಲ್ಲಿ ಮುಂಬ ನೆಲೆಗೊಂಡಿದ್ದಾಳೆ. ಇಲ್ಲೂ ಅರಳೀ ಮರ ಮತ್ತು ಏಳು ಮಂದಿ ಅಕ್ಕತಂಗಿಯರ ಪರಿಕಲ್ಪನೆ ಹರಿದು ಬಂದಿದೆ. ಮೊಗವೀರರ (ಇವರೂ ಹರಪ್ಪ ಮೂಲದ ಕೋಲಿಗಳೇ) ಪೈಕಿ ಹಳಬರಾದವರು ಈ ಕುಲಮಹಾಸ್ತ್ರೀಯನ್ನು ‘ಅಜ್ಜಮ್ಮ’ ಎಂದು ಕರೆಯುತ್ತಾರೆ. ಈ ತಿಳುವಳಿಕೆ ಪರಂಪರಾಗತವಾಗಿ ಬಂದದ್ದು. ಯಾಕೆಂದರೆ, ದ್ರಾವಿಡರು ನೇರವಾಗಿ ಮುಂಬಾಳ ಮಕ್ಕಳಲ್ಲ. ಮುಂಬಾಳ ನಾಲ್ಕನೆಯ ಮಗಳಾದ ‘ವಾಂಜಿ ಕೊ’ ಎಂಬುವವಳ ಸಂತತಿಯವರೆಂಬ ತಿಳುವಳಿಕೆಯೂ ಹರಿದುಬಂದಿದೆ. ಈ ವಾಂಜಿಕೊ ನೇ ಕೊರವಿಯಾದದ್ದು. ಕೊರವಂಜಿ ಎಂಬುದು ವಾಂಜಿಕೊ ನ ವರ್ಣಪಲ್ಲಟದ ರೂಪವಾಗಿದೆ. ಆಫ್ರಿಕದ ವಾಂಜಿಕೊ ಮತ್ತು ಈ ನೆಲದ ಕೊರವಿಯರಿಬ್ಬರ ಸಂಖ್ಯೆಯೂ ಏಳೇ ಆಗಿದೆ. ಇಬ್ಬರ ಚಿಹ್ನೆಗಳು ಚಂದ್ರನೇ ಆಗಿದ್ದಾನೆ. ಮುಂದೆ ಕೊರವಿಯ ನೆನಪನ್ನೇ ಅಳಿಸಿಹಾಕತೊಡಗಿದಾಗ, ಕೊರವಿ ಮೀನ್‌ಕಣ್ಣಿಯ (ಮೀನಾಕ್ಷಿ) ರೂಪದಲ್ಲಿ ಪುರಾಣದ ನೆಲೆಯಲ್ಲಿ ಮರು ಅವತರಿಸಿದಳು.
ಈ ಮೀನ್‌ಕಣ್ಣಿಯನ್ನು ತಮಿಳುನಾಡಲ್ಲಿನ ಹಳಬರು ಇಂದಿಗೂ ವಾಂಜಿಕೊ ಎಂದು ಕರೆಯುವುದುಂಟು. ವಾಂಜಿಕೊರವಿಯ ಚಿಹ್ನೆಯಾದ ಚಂದ್ರ ಈ ಮೀನ್‌ಕಣ್ಣಿಯ ತಲೆಯಲ್ಲಿರುವುದನ್ನು ಗಮನಿಸಬಹುದು. ಮೀನ್‌ಕಣ್ಣಿಯನ್ನು ಮದುವೆಯಾದ ಶಿವನನ್ನು ಕೂಡ ಇಂದಿಗೂ ವಾಂಜಿಕೊ ಅಂತಲೇ ಕರೆಯುತ್ತಾರೆ. ತಮಿಳು ಸಂಗಂ ಸಾಹಿತ್ಯದ ಪ್ರಾಚೀನ ಕೃತಿಯಾದ ‘ತೊಲ್‌ಕಾಪಿಯಂ’ನಲ್ಲಿ ಉಲ್ಲೇಖಿತಗೊಂಡಿರುವ ಕೊಟ್ರವೈ (ನಮ್ಮಲ್ಲಿ ಕೊರವಿ) ಅಲ್ಲಿ ಶಿವನ ಮೊದಲ ಹೆಂಡತಿಯಾಗಿ ಪ್ರಸ್ತಾಪಿತಗೊಂಡಿದ್ದಾಳೆ. (ಚಿತ್ರ 10) ಮೂಲ ಪುರಾಣ ಕೊಂಚ ಪಲ್ಲಟಗೊಂಡಿದ್ದು , ವಾಂಜಿಕೊರವಿಯ ತಾಯಿಯಾದ ಮುಂಬಾಳನ್ನೇ ಸೃಷ್ಟಿಸಿದ ಮುರುಂಗು ಇಲ್ಲಿ ಕೊರವಿಯ ಮಗನಾಗಿದ್ದಾನೆ. ‘ಕೊಟ್ರವೈ ಚಿರುವ - ಪಳೆಯೋಳ್ ಕುಳವಿ’ ಎಂಬ ವಿಶೀಷ ವರ್ಣನೆಗೆ ಒಳಗಾಗಿದ್ದಾನೆ. ಸಂಗಂ ಸಾಹಿತ್ಯದ ‘ತಿರುಮುರುಗಟ್ರುಪ್ಪಾಡೈ’ ಎಂಬ ಕೃತಿಯಲ್ಲಿ ಈ ವಿವರಗಳಿವೆ. ಹಾಗಾಗಿ ಕೊರವಿಯೇ ದ್ರಾವಿಡರೆಲ್ಲರ ಮೂಲ ಮಹಾಮಾತೆ. ಮುಂಬ ಆದಿಮ ಮೂಲ ಅಜ್ಜಿಯಾಗುತ್ತಾಳೆ. ನಂತರದ ಸಂಗಂ ಸಾಹಿತ್ಯದಲ್ಲಿ ಉಮಾ ಎಂಬ ವೈದಿಕಾರ್ಯರ ದೇವತೆಯ ಪ್ರವೇಶವಾಗಿ ಕ್ರಮೇಣ ಕೊಟ್ರವೈ ಕೊರವಿಯ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾಳೆ. ನಂತರ ಪಾರ್ವತಿ ‘ದುರ್ಗಿ’ ಕಾಳಿಯರೂ ನುಸುಳಿ, ಕೊರವಿ ಕಾಲಕಳೆದಂತೆ ನಗಣ್ಯಳಾಗತೊಡಗಿದಳು.
ಇಂದಿನ ಕೇರಳದಲ್ಲಿನ ಭಗವತಿ ದೇವಾಲಯಗಳೆಲ್ಲವೂ ಒಂದೊಮ್ಮೆ ಕೊರವಿಯ ಕೋಯಿಲ್‌ಗಳಾಗಿದ್ದಂತಹವೇ. ಹಾಗೆಯೇ ತಮಿಳುನಾಡಿನ ದುರ್ಗಿ, ಕಾಳಿಯರ ದೇವಾಲಯಗಳೂ ಕೊರವಿಯ ಕೋಯಿಲ್‌ಗಳಾಗಿದ್ದಂತಹವೇ. ಕೊರವಿಯನ್ನು ಯುದ್ಧ ದೇವತೆಯಾಗಿ ಚಿತ್ರಿಸಿ, ನಂತರ ದುರ್ಗಿಯೊಂದಿಗೆ ಸಮೀಕರಿಸಿದ್ದರ ಫಲವಿದು! ಆದರೂ ಇಂದಿಗೂ ಕರಾವಳಿ ಕರ್ನಾಟಕದಲ್ಲಿ ಕೊರ್ತಿ ಭೂತಕೋಲದಲ್ಲಿ ಕೊರವಿ ಉಳಿದಿದ್ದಾಳೆ. ಕೇರಳದ ಕುರವತ್ತಿ ತೆಯ್ಯಂನಲ್ಲೂ ಕ್ಷೀಣವಾಗಿ ಉಸಿರಾಡುತ್ತಿದ್ದಾಳಾದರೂ, ಕೊರವಿಯ ನೆನಪಿಗೆ ದುರ್ಗಿಯ ಮುಖವಾಡ ಹಾಕಲಾಗಿದೆ. ಸಂಗಂ ಕಾಲದ ಕೊರವಿ ಕುರಿತ ದೀರ್ಘ ಕಾವ್ಯವೇ ಕಳೆದು ಹೋಗಿದೆ. ತೆನ್‌ಕೂತುವಿನಲ್ಲಂತೂ ಕೊರವಿಯ ಕತೆಯನ್ನಿಂದು ಯಾರೂ ಹಾಡಿ, ಆಡಲಾರದಂತಾಗಿದೆ! ಕೊರವಿ, ವಳ್ಳಿ, ಪೇಯ್ ಮತ್ತು ನಾಟ್ಟು ಕೂತು ಕತೆಗಳು ಮಾಯವಾಗಿ ಶತಮಾನಗಳೇ ಕಳೆದಿವೆ.
ನಾವು ನಿಜಕ್ಕೂ ಮರೆತಿರುವುದು ‘ಕೊ’-‘ಕೋಲಿ’-‘ಕೊರವಿ’ಯರನ್ನೇ. ಕೊ ಎಂಬುದಂತೂ ನಮ್ಮ ಸಂಸ್ಕೃತಿ ಕಣಜದ ಕೀಲಿ ಕೈ. ಕೊ ಎಂಬುದರ ಮೂಲಾರ್ಥ ಪೂರ್ವಜರು ಎಂದೇ ಇದೆ. ಆಫ್ರಿಕನ್ನರಂತೆಯೇ ದ್ರಾವಿಡರೂ ಕೂಡ Ancestral Worshippers.. ನಮ್ಮ ಇಂದಿನ ಅಸ್ತಿತ್ವಕ್ಕೆ ಕಾರಣೀಭೂತರಾದ ನಮ್ಮ ಪೂರ್ವಜರಿಗೆ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸುವುದೇ ಪೂಜೆ. ಈ ಪೂರ್ವಜರನ್ನು, ಅರ್ಥಾತ್ ‘ಕೊ’ ಗಳನ್ನು ನೆಲೆಗೊಳಿಸಿದ ಸ್ಥಳವೇ ಕೊ + ಇಲ್ಲು = ಕೋಯಿಲ್. ಇಲ್ಲು ಎಂದರೆ ಮನೆ ಎಂಬರ್ಥವೂ ತೆಲುಗಿನಲ್ಲಂತೂ ಇಂದಿಗೂ ಉಳಿದಿದೆ. ಕೊ ಗೌರವಾರ್ಥ ಕೊಯಿಲ್ ಎದುರು ಹಾಕುವುದೇ ಕೋಲಂ (ರಂ-ಕೋಲಿ). ಕೊ ಎದುರಿಗೆ ಬೆಳಗಿಸುವುದೇ ಕೋವೊತ್ತುಗಳು (ಕೊ-ಬತ್ತಿಗಳು), ಅಂದರೆ ಹಣತೆಗಳು. ಈಗ ಮೇಣದ ಬತ್ತಿಗಳನ್ನು ತೆಲುಗಲ್ಲಿ ಕೋವೊತ್ತುಲು ಎನ್ನುತ್ತಾರೆ. ಕೋಲದಲ್ಲಿ ಇರುವುದೂ ಇದೇ ಕೊ. ತೆಲುಗಿನಲ್ಲಿ ಕೊ ಉತ್ಸವದಲ್ಲಿ ನುಡಿಸುವ ವಾದ್ಯಸಂಗೀತಕ್ಕೆ ಕೊಲುವು ಎಂದೇ ಕರೆಯುವುದುಂಟು. ಕೋರ್ ಎಂದರೆ ಗಂಡಸು ಮತ್ತು ಕೊರ್ತಿ ಎಂದರೆ ಹೆಣ್ಣು ಎಂಬರ್ಥವು ಇಂದಿಗೂ ಜಾರಿಯಲ್ಲಿದೆ. ಹಿಂದಿನ ಕಾಲದಲ್ಲಿ ಗಂಡನನ್ನು ತಮಿಳಿನಲ್ಲಿ ಕೊರುಂತನ್ ಎಂದೇ ಕರೆಯುತ್ತಿದ್ದರು. ಗಂಗಾ ನದಿಯ ಮೂಲದೊಂದಿಗೆ ಬೆಸೆಯಲ್ಪಡುವ ಕಲೌರಿಯ ಎಂಬ ವೈದಿಕಪೂರ್ವ ಜಲ ಅಪ್ಸರೆಯ ಕತೆಯೂ ಉತ್ತರ ಭಾರತದಲ್ಲಿದೆ. ಸಂತ ಕಬೀರ್ ಕೂಡ ತನ್ನನ್ನು ‘ಕಾಹೇತ್ ಕಬೀರ್ ಕೋರಿ’ ಎಂದು ಕೋಲಿ ಮೂಲದಲ್ಲೇ ಗುರುತಿಸಿಕೊಂಡಿದ್ದಾನೆ.
ನಮ್ಮಲ್ಲಿ ದೇವ, ದೇವತೆ, ದೇವರುಗಳ ಪರಿಕಲ್ಪನೆಯೇ ಇರಲಿಲ್ಲ. ಹಾಗಾಗಿ ಆರ್ಯ ದೇವರುಗಳು ನಮ್ಮ ಪೂರ್ವಜರೂ ಅಲ್ಲವಾಗಿ ಅವರು ‘ಕೊ’ಗಳೂ ಅಲ್ಲ. ಅವರ ಗುಡಿಗಳು ಕೋಯಿಲ್‌ಗಳೂ ಅಲ್ಲ. ‘ದ್ರಾವಿಡರ ಪೂರ್ವಿಕ ಪಿತೃವಾಗಿರುವ ಶಿವನನ್ನು ಕ್ರಮೇಣ ದೈವತ್ವದ ಹಂತಕ್ಕೇರಿಸಲಾಯಿತು’ ಎಂದು ವಂಶವಾಹಿ ವಿಜ್ಞಾನಿ ಡಾ.ಸ್ಪೆನ್ಸರ್ ವೆಲ್ಸ್ ಹೇಳಿರುವ ಮಾತು ಈ ಹಿನ್ನೆಲೆಯಲ್ಲಿ ತುಂಬಾ ಮಾರ್ಮಿಕವಾದದ್ದು ಎಂದೇ ನಾನು ಭಾವಿಸಿದ್ದೇನೆ.
ಈ ಸಂಸ್ಕೃತಿ ಅಂಶಗಳ ಬುನಾದಿಯ ಮೇಲೆ ಇನ್ನುಮುಂದಷ್ಟೇ ಕೊ ಸಂಸ್ಕೃತಿಯ ಬಗ್ಗೆ ನಾವು ಮಾತನಾಡಬಹುದಾಗಿದೆ.