ಮಡಿಕೇರಿ | ʼಹಿಟ್ ಆ್ಯಂಡ್ ರನ್ʼಗೆ ಬಿಜೆಪಿ ಕಾರ್ಯಕರ್ತ ಬಲಿ : ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಮಡಿಕೇರಿ: ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದಲ್ಲಿ ಗುರುವಾರ ರಾತ್ರಿ ಅಪಘಾತದಿಂದ ಬಿಜೆಪಿ ಕಾರ್ಯಕರ್ತ ರಾಮಪ್ಪ (68) ಅವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಬಂಧಿಸಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಹಾಗೂ ಸಂಘಪರಿವಾರ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದವು.
ಕಾರು ಡಿಕ್ಕಿ ಹೊಡೆದು ಪರಾರಿಯಾದ ಆರೋಪಿಗಳ ಪೈಕಿ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ. ಉಳಿದವರನ್ನು ತಕ್ಷಣ ಬಂಧಿಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು ರಸ್ತೆ ತಡೆ ಪ್ರತಿಭಟನೆ ನಡೆಸಿ ರಾಮಪ್ಪ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು.
ನಿಷೇಧಾಜ್ಞೆ ಜಾರಿ
ವಾಲ್ನೂರಿನಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಿದ್ದಾಪುರ ನಗರ ವಾಲ್ನೂರು ಗ್ರಾಮ, ಅರೆಕಾಡು ಗ್ರಾಮ, ನೆಲ್ಯಹುದಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಎ.19 ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಘಟನೆ ಹಿನ್ನೆಲೆ
ಗುರುವಾರ ರಾತ್ರಿ ಬಿಜೆಪಿ ಪರವಾಗಿ ರಾಮಪ್ಪ (68) ಅವರು ಪಕ್ಷದ ಇತರ ಸದಸ್ಯರೊಂದಿಗೆ ಮತಯಾಚನೆ ಮಾಡುತ್ತಾ ರಸ್ತೆಯಲ್ಲಿ ಸಾಗುತ್ತಿದ್ದರು. ಇದೇ ಸಂದರ್ಭ ಕಾರೊಂದು ಇವರಿಗೆ ಢಿಕ್ಕಿಯಾಗಿದ್ದು, ಘಟನೆಯ ಬಳಿಕ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡ ರಾಮಪ್ಪ ಅವರು ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ಚಂದ್ರರಾಜ್ ಹಾಗೂ ರತೀಶ್ ಎಂಬುವವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ಥಳೀಯರು ಅಪಘಾತ ಮಾಡಿದ ಕಾರನ್ನು ಹಿಂಬಾಲಿಸಿ ಚಿಕ್ಲಿಹೊಳೆ ಬಳಿ ಚಾಲಕ ಅರ್ಷದ್ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.