ಬಿಜೆಪಿಯ ರಾಜಕೀಯ ನಾಟಕ ಕೊಡಗಿನಲ್ಲಿ ನಡೆಯುವುದಿಲ್ಲ: ಎಚ್.ಎ.ಹಂಸ ಕೊಟ್ಟಮುಡಿ

ಎಚ್.ಎ ಹಂಸ ಕೊಟ್ಟಮುಡಿ
ಮಡಿಕೇರಿ : ಸಾವಿನ ಮನೆಯಲ್ಲಿ ರಾಜಕೀಯ ಮಾಡಿ, ರಾಜಕೀಯ ಲಾಭವನ್ನು ಪಡೆಯುವ ಬಿಜೆಪಿಯ ಕೀಳುಮಟ್ಟದ ರಾಜಕೀಯ ಕೊಡಗಿನಲ್ಲಿ ನಡೆಯುವುದಿಲ್ಲ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಚ್.ಎ ಹಂಸ ಕೊಟ್ಟಮುಡಿ ಬಿಜೆಪಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ,ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿಯ ಕೀಳುಮಟ್ಟದ ರಾಜಕೀಯಕ್ಕೆ ರಾಜ್ಯದ ಜನತೆ ದಿಟ್ಟ ಉತ್ತರ ಮುಂದಿನ ಚುನಾವಣೆಗಳಲ್ಲಿ ನೀಡಲಿದ್ದಾರೆ. ವಿನಯ್ ಸೋಮಯ್ಯ ಅವರ ಕುಟುಂಬದೊಂದಿಗೆ ಇಡೀ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅದೆಷ್ಟೋ ಬಡ ಕುಟುಂಬಗಳನ್ನು ಬೀದಿಯಲ್ಲಿ ನಿಲ್ಲಿಸಿರುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕೊಡಗಿನ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್ ಪೊನ್ನಣ್ಣ ಅವರನ್ನು ಎಳೆದು ತರುವ ಬಿಜೆಪಿ ರಾಜಕೀಯ ಉದ್ದೇಶವೂ ಎಂದಿಗೂ ಈಡೇರುವುದಿಲ್ಲ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಡಾ.ಮಂತರ್ ಗೌಡ ಹಾಗೂ ಎ.ಎಸ್ ಪೊನ್ನಣ್ಣ ರಾಜಕೀಯ ರಹಿತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೂ ಕೊಡಗು ಕಾಂಗ್ರೆಸ್ ಮುಖಂಡನಿಗೂ ಕೂಡ ಯಾವುದೇ ರೀತಿಯ ಸಂಬಂಧವಿಲ್ಲ. ಸದ್ಯದಲ್ಲೇ ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕೊಡಗಿನ ಶಾಸಕರ ಜನಪ್ರಿಯತೆ ಕಂಡು ಹತಾಶೆಗೊಂಡಿರುವ ನಿರುದ್ಯೋಗಿ ಮಾಜಿ ಸಂಸದನಿಗೆ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ. ಬಿಜೆಪಿ ಪಕ್ಷದಲ್ಲಿ ಲೆಕ್ಕಕ್ಕೂ,ಆಟಕ್ಕೂ ಇಲ್ಲದಂತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಮೊದಲು ಬಿಜೆಪಿಯಲ್ಲಿ ತಮ್ಮ ಸ್ಥಾನ ಭದ್ರಗೊಳಿಸಲಿ ಎಂದು ಹೇಳಿರುವ ಅವರು, ಕೊಡಗು ಜಿಲ್ಲೆಯಲ್ಲಿ ಪ್ರತಾಪ್ ಸಿಂಹ ಅವರ ರಾಜಕೀಯ ನಾಟಕ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮುಂದಿನ 25 ವರ್ಷಗಳ ಕಾಲ ಡಾ.ಮಂತರ್ ಗೌಡ ಹಾಗೂ ಎ.ಎಸ್ ಪೊನ್ನಣ್ಣ ಅವರು ಗೆಲುವು ಸಾಧಿಸಲಿದ್ದಾರೆ ಎಂದು ಎಚ್.ಎ ಹಂಸ ಕೊಟ್ಟಮುಡಿ ತಿಳಿಸಿದ್ದಾರೆ.