ಹೆಲ್ಮೆಟ್ ಧರಿಸಿಲ್ಲವೆಂದು ಕಾರು, ಆಟೊ ಮಾಲಕರಿಗೆ ದಂಡ!
ಪಿರಿಯಾಪಟ್ಟಣ ಪೊಲೀಸರ ಯಡವಟ್ಟು

ಸಾಂದರ್ಭಿಕ ಚಿತ್ರ
ಸಿದ್ದಾಪುರ (ಕೊಡಗು): ಬೈಕ್ ಸವಾರನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ದಂಡ ವಿಧಿಸುವುದು ಸಹಜ. ಆದರೆ ಆಟೊ ಮತ್ತು ಕಾರು ಮಾಲಕರಿಗೆ ಹೆಲ್ಮೆಟ್ ಧರಿಸಿಲ್ಲವೆಂದು ಆನ್ ಲೈನ್ ಮೂಲಕ ದಂಡ ವಿಧಿಸಿರುವ ವಿಚಿತ್ರ ಘಟನೆ ನಡೆದಿದೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರದ ಆಟೊ ಚಾಲಕ ಶಾನವಾಸ್ ಎಂಬವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದಾಗಿ ಆಟೊ ರಿಕ್ಷಾದ ಸಂಖ್ಯೆ ಸಹಿತ ಜ.12ರಂದು ಶಾನವಾಝ್ ಅವರ ಮೊಬೈಲ್ ಸಂಖ್ಯೆಗೆ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ದಂಡ ಪಾವತಿಸುವಂತೆ ಸಂದೇಶ ಬಂದಿದ್ದು, ಸಂದೇಶದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಡಿ.21 ಮತ್ತು ಜ.12ರಂದು ಎರಡು ಬಾರಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದಾಗಿ ಹಾಗೂ ಒಂದು ಸಾವಿರ ರೂ. ದಂಡ ಪಾವತಿಸುವಂತೆ ಉಲ್ಲೇಖವಾಗಿದೆ.
ಮತ್ತೊಂದು ಪ್ರಕರಣದಲ್ಲಿ ನೆಲ್ಲಿಹುದಿಕೇರಿ ಟಿಪ್ಪರ್ ಚಾಲಕ ವಿಠಲ ಎಂಬವರು ಡಿ.7 ರಂದು ಪಿರಿಯಾಪಟ್ಟಣ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದಾಗಿ ಆರೋಪಿಸಿ ಡಿ.25 ರಂದು ವಿಠಲರವರ ದೂರವಾಣಿ ಸಂಖ್ಯೆಗೆ ಮೈಸೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ದಂಡ ಪಾವತಿಸುವಂತೆ ಸಂದೇಶ ಬಂದಿದೆ. ಸಂದೇಶದಲ್ಲಿ ವಿಠಲ ಅವರ ಮಾರುತಿ ಓಮಿನಿ ವಾಹನದ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ.
ಎರಡೂ ಪ್ರಕರಣದಲ್ಲಿ ಉಲ್ಲೇಖಿಸಿದ ದಿನಗಳಲ್ಲಿ ತಾವುಗಳು ಪಿರಿಯಾಪಟ್ಟಣಕ್ಕೆ ತೆರಳಿಲ್ಲ ಹಾಗೂ ಉಲ್ಲೇಖಿಸಿದ ವಾಹನ ಸಂಖ್ಯೆಯಲ್ಲಿ ದ್ವಿಚಕ್ರ ಹೊಂದಿಲ್ಲ ಎಂದು ಶಾನವಾಝ್ ಹಾಗೂ ವಿಠಲ ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಟ್ರಾಫಿಕ್ ನಿಯಮಗಳನ್ನು ಪಾಲಿಸದೆ ವಾಹನ ಚಾಲನೆ ಮಾಡುವ ವಾಹನಗಳ ಸಂಖ್ಯೆ ಸ್ಪಷ್ಟವಾಗಿ ಕ್ಯಾಮರಾದಲ್ಲಿ ಸೆರೆಯಾಗದಿದ್ದರೆ ಈ ರೀತಿಯ ತಪ್ಪುಗಳು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಸಂದೇಶ ಬಂದಿರುವ ವಾಹನದ ಮಾಲಕರಿಗೆ ಮತ್ತೊಮ್ಮೆ ಅಂಚೆ ಮೂಲಕ ನೋಟಿಸ್ ತಲುಪಲಿದೆ. ನೋಟಿಸ್ನಲ್ಲಿರುವ ಮೊಬೈಲ್ ಸಂಖ್ಯೆ ಸಂಪರ್ಕಿಸಿ, ವಾಹನದ ದಾಖಲೆಗಳ ಮಾಹಿತಿ ಒದಗಿಸಿದ್ದಲ್ಲಿ ದಂಡ ಪಾವತಿ ಮಾಡುವ ಅವಶ್ಯ ಇರುವುದಿಲ್ಲವೆಂದು ಹೆಸರು ಹೇಳಲು ಇಚ್ಛಿಸದ ಮೈಸೂರು ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.