ಮಡಿಕೇರಿ| ರೂಂ ಬುಕ್ ಮಾಡುವ ನೆಪದಲ್ಲಿ 18 ಸಾವಿರ ರೂ. ವಂಚಿಸಿದ ಸೈಬರ್ ವಂಚಕರು
ಸಾಂದರ್ಭಿಕ ಚಿತ್ರ | Photo: NDTV
ಮಡಿಕೇರಿ: ರೂಂ ಬುಕ್ ಮಾಡುವ ನೆಪದಲ್ಲಿ ಮಡಿಕೇರಿ ನಗರದ ಹೊಟೇಲ್ ವೊಂದರ ಮಾಲೀಕರಿಗೆ ಸೈಬರ್ ವಂಚಕರು 18 ಸಾವಿರ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬ ರೂಂ ಬೇಕೆಂದು ಆನ್ ಲೈನ್ ಮೂಲಕ ಹೊಟೇಲ್ ಗೆ ಕೋರಿಕೆ ಕಳುಹಿಸಿದ್ದಾನೆ. ರೂಂ ಬುಕ್ ಮಾಡಿಕೊಳ್ಳಲು ಮುಂಗಡ ಹಣ ಪಾವತಿ ಮಾಡಬೇಕೆಂದು ತಿಳಿಸಿದ ಹೊಟೇಲ್ ನ ವ್ಯವಸ್ಥಾಪಕರು ಹಣ ವರ್ಗಾವಣೆಯ ಮೊಬೈಲ್ ಸಂಖ್ಯೆಯನ್ನು ಆತನಿಗೆ ನೀಡಿದ್ದಾರೆ. ರೂಂ ಬೇಡಿಕೆಯನ್ನಿಟ್ಟಿದ್ದ ವ್ಯಕ್ತಿ ತನ್ನ ಮೊಬೈಲ್ ಮೂಲಕ ರೂ.20 ಸಾವಿರ ಪಾವತಿ ಮಾಡಿರುವ ಸಂದೇಶದ ಸ್ಕ್ರೀನ್ ಶಾಟ್ ನ್ನು ಹೊಟೇಲ್ ಮಾಲೀಕರಿಗೆ ಕಳುಹಿಸುತ್ತಾನೆ. ನಂತರ ತಕ್ಷಣ ಕರೆ ಮಾಡಿ ಮುಂಗಡ ಹಣ ರೂ. 2 ಸಾವಿರಕ್ಕೆ ಬದಲಾಗಿ 20 ಸಾವಿರ ರೂ. ಪಾವತಿ ಮಾಡಿರುವೆ, 18 ಸಾವಿರವನ್ನು ನನಗೆ ಮರಳಿಸಿ ಎಂದು ಮಾಲೀಕರಲ್ಲಿ ಮನವಿ ಮಾಡುತ್ತಾನೆ.
20 ಸಾವಿರ ಬಂದಿರುವ ಬಗ್ಗೆ ಸ್ಕ್ರೀನ್ ಶಾಟ್ ಮೂಲಕ ಮನವರಿಕೆ ಮಾಡಿಕೊಂಡ ಮಾಲೀಕರು ಕರೆ ಮಾಡಿದಾತನಿಗೆ 18 ಸಾವಿರವನ್ನು ಮರಳಿಸುತ್ತಾರೆ. ಸ್ವಲ್ಪ ಹೊತ್ತು ಕಳೆದ ನಂತರ ಅದೇ ವ್ಯಕ್ತಿಯ ಮೊಬೈಲ್ ಸಂಖ್ಯೆಯಿಂದ 27 ಸಾವಿರ ರೂ. ಪಾವತಿಯಾಗಿರುವ ಬಗ್ಗೆ ಸ್ಕ್ರೀನ್ ಶಾಟ್ ಸಂದೇಶ ಬರುತ್ತದೆ. ಆತ ಮತ್ತೆ ಕರೆ ಮಾಡಿ ನಾನು ಯಾವುದೋ ಆಸ್ಪತ್ರೆಗೆ ಪಾವತಿಸಬೇಕಾದ ಹಣವನ್ನು ತಮಗೆ ತಪ್ಪಾಗಿ ಕಳುಹಿಸಿದ್ದೇನೆ. ಹಣವನ್ನು ಮರಳಿಸಿ ಎಂದು ಕೋರಿಕೆ ಇಡುತ್ತಾನೆ.
ಇದರಿಂದ ಸಂಶಯಗೊಂಡ ಹೊಟೇಲ್ ಮಾಲೀಕರು ತಮ್ಮ ಖಾತೆಯನ್ನು ಪರಿಶೀಲಿಸಿದಾಗ ವಂಚಕ ವ್ಯಕ್ತಿ ಯಾವುದೇ ಹಣವನ್ನು ಪಾವತಿಸಿರುವುದಿಲ್ಲ. 20 ಸಾವಿರ ಮತ್ತು 27 ಸಾವಿರ ಪಾವತಿಸಿರುವುದು ಸುಳ್ಳೆಂದು ಮನವರಿಕೆಯಾಗುತ್ತದೆ. ತಮ್ಮ ಖಾತೆಯಿಂದ 18 ಸಾವಿರ ರೂ. ಕಳೆದುಕೊಂಡಿರುವುದು ಖಾತ್ರಿಯಾದ ತಕ್ಷಣ ವಂಚಕ ಕರೆ ಮಾಡಿದ ಮತ್ತು ಹಣದ ವ್ಯವಹಾರದ ಸ್ಕ್ರೀನ್ ಶಾಟ್ ಕಳುಹಿಸಿದ ಎರಡೂ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಾರೆ. ಆದರೆ ಯಾವ ಸಂಖ್ಯೆಯೂ ಕಾರ್ಯನಿರ್ವಹಿಸದೆ ಇದ್ದಾಗ ಇದೊಂದು ಸೈಬರ್ ವಂಚನೆ ಎನ್ನುವುದು ಮಾಲೀಕರಿಗೆ ತಡವಾಗಿ ಅರ್ಥವಾಗುತ್ತದೆ.
ತಕ್ಷಣ ಎಚ್ಚೆತ್ತುಕೊಂಡ ಹೊಟೇಲ್ ಮಾಲೀಕರು ತಮಗಾದ ವಂಚನೆ ಬಗ್ಗೆ ಕೊಡಗು ಜಿಲ್ಲಾ ಸೈಬರ್ ಅಪರಾಧ ಪತ್ತೆದಳಕ್ಕೆ ದೂರು ಸಲ್ಲಿಸಿದ್ದಾರೆ.