ಮಡಿಕೇರಿ| ಸಂಸದರ ಅಮಾನತಿಗೆ ಖಂಡನೆ: ಕಾಂಗ್ರೆಸ್ ಪ್ರತಿಭಟನೆ
ಮಡಿಕೇರಿ: ಸಂಸತ್ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಚರ್ಚೆಯಲ್ಲಿ ತೊಡಗಿದ್ದ 142 ಸಂಸದರನ್ನು ಅಮಾನತು ಮಾಡಿದ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತಪ್ಪ ಮಾತನಾಡಿ, ʼಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೆಲ್ಲ ಭದ್ರತಾ ಲೋಪವಾಗಿದೆ. 22 ವರ್ಷಗಳ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸಂಸತ್ ಮೇಲೆ ದಾಳಿಯಾಗಿದೆ. ಇಂದು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದ ವ್ಯಕ್ತಿಗಳು ಸಂಸತ್ ನಲ್ಲಿ ಆತಂಕ ಸೃಷ್ಟಿಸಿದ್ದು, ಈ ಘಟನೆ ದೇಶದ ಗೌರವಕ್ಕೆ ದಕ್ಕೆ ತಂದಿದೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದ ಸಂಸದರನ್ನು ಅಮಾನತು ಮಾಡಿರುವುದು ಖಂಡನೀಯವೆಂದ ಧರ್ಮಜ ಉತ್ತಪ್ಪ, ತಕ್ಷಣ ಪ್ರತಾಪ್ ಸಿಂಹ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಪಿ.ರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಮುಖರಾದ ಕೊಲ್ಯದ ಗಿರೀಶ್, ವಿ.ಪಿ.ಸುರೇಶ್, ಕಾನೆಹಿತ್ಲು ಮೊಣ್ಣಪ್ಪ, ಆರ್.ಪಿ.ಚಂದ್ರಶೇಖರ್, ಜುಲೆಕಾಬಿ, ಚುಮ್ಮಿ ದೇವಯ್ಯ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.