ಕೊಡಗಿನಲ್ಲಿ ಉತ್ತಮ ಮಳೆ | ನದಿ, ತೊರೆ, ಜಲಪಾತಗಳಿಗೆ ಇಳಿಯದಂತೆ ನಿರ್ಬಂಧ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ವಿವಿಧೆಡೆ ಮರ, ಬರೆ ಬಿದ್ದಿದ್ದು, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ ಮಡಿಕೇರಿ- ಸಂಪಾಜೆಯ ದೇವರಕೊಲ್ಲಿ ಬಳಿ ಬೃಹತ್ ಮರವೊಂದು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೊಡಗು- ಕೇರಳ ಗಡಿ ಭಾಗದ ಕುಟ್ಟದ ಬಳಿಯೂ ಹೆದ್ದಾರಿಗೆ ಅಡ್ಡಲಾಗಿ ಮರ ಬಿದ್ದಿತ್ತು. ಗ್ರಾಮೀಣ ಭಾಗದ ರಸ್ತೆಗಳಲ್ಲೂ ಮರ ಬಿದ್ದ ಘಟನೆ ನಡೆದಿದ್ದು, ತೆರವು ಕಾರ್ಯಾಚರಣೆ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಕಲ್ಪಿಸಿಕೊಡಲಾಯಿತು. ಅರಣ್ಯ ಇಲಾಖೆ, ಚೆಸ್ಕಾಂ ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ನೀರಿಗಿಳಿಯದಂತೆ ನಿರ್ಬಂಧ :
ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ಜಲಪಾತ, ಝರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಅಣೆಕಟ್ಟು, ಜಲಾಶಯದ ಪ್ರದೇಶಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ನೀರಿಗಿಳಿಯದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ನದಿ ಮತ್ತು ಜಲಪಾತಗಳಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡಿದೆ.
ಹಾರಂಗಿ ನೀರಿನ ಮಟ್ಟ :
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2842.27 ಅಡಿಗಳು. ಕಳೆದ ವರ್ಷ ಇದೇ ದಿನ 2821.62 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 1.20 ಮಿ.ಮೀ.,ಕಳೆದ ವರ್ಷ ಇದೇ ದಿನ 4.80 ಮಿ.ಮೀ., ಇಂದಿನ ನೀರಿನ ಒಳಹರಿವು 1649 ಕ್ಯೂಸೆಕ್, ಕಳೆದ ವರ್ಷ ಇದೇ ದಿನ 608 ಕ್ಯೂಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 200 ಕ್ಯೂಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 30 ಕ್ಯೂಸೆಕ್ ನೀರು ಹರಿದಿದೆ.