ಕೊಡಗಿನ ವಿವಿಧೆಡೆ ಕಾಡಾನೆ ದಾಳಿ : ಆಟೋರಿಕ್ಷಾ ಜಖಂ, ತೋಟಗಳಿಗೆ ಹಾನಿ
ಮಡಿಕೇರಿ : ಸುರಿಯುತ್ತಿರುವ ಮಳೆಯ ನಡುವೆ ಕೊಡಗು ಜಿಲ್ಲೆಯ ವಿವಿಧೆಡೆ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಗ್ರಾಮೀಣ ಭಾಗದಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿರುವ ಆನೆಗಳು ತೋಟಗಳಿಗೆ ಹಾನಿ ಮಾಡುತ್ತಿವೆ ಮತ್ತು ವಾಹನಗಳನ್ನು ಜಖಂಗೊಳಿಸುತ್ತಿವೆ.
ನಿರಂತರ ಮಳೆಯಿಂದಾಗಿ ಕಾಫಿ ತೋಟಗಳು ಹಸಿರಾಗಿವೆ, ಮರಗಳಲ್ಲಿ ಹಲಸಿನ ಹಣ್ಣು ಸುವಾಸನೆ ಬೀರುತ್ತಿವೆ. ಹಣ್ಣು ಪ್ರಿಯ ಕಾಡಾನೆಗಳು ತೋಟದಿಂದ ತೋಟಕ್ಕೆ ಸಂಚರಿಸುತ್ತ ಕೃಷಿ ಫಸಲನ್ನು ಬಾಯಿ ಹಾಕುತ್ತಿದೆ. ಮುಖ್ಯ ರಸ್ತೆಗಳಲ್ಲಿ ದಿಢೀರ್ ಆಗಿ ಪ್ರತ್ಯಕ್ಷವಾಗುವ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸುತ್ತಿವೆ.
ಮನೆಯ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ನಾಲಡಿ ಗ್ರಾಮದ ವಾಟೆಕಾಡುವಿನಲ್ಲಿ ನಡೆದಿದೆ. ಗ್ರಾಮದ ನಿವಾಸಿ ದೇವಯ್ಯ ಎಂಬುವವರು ಎಂದಿನಂತೆ ಆಟೋ ರಿಕ್ಷಾ ನಿಲ್ಲಿಸಿ ಮನೆಗೆ ತೆರಳಿದ್ದರು. ರಾತ್ರಿಯ ವೇಳೆ ಕಾಡಾನೆ ಆಟೋ ರಿಕ್ಷಾದ ಮೇಲೆ ದಾಳಿ ಮಾಡಿ ಜಖಂಗೊಳಿಸಿದೆ ಎನ್ನಲಾಗಿದೆ.
ಚೆಯ್ಯಂಡಾಣೆ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದ್ದು, ಬೊವ್ವೇರಿಯಂಡ ಹರೀಶ್ ಹಾಗೂ ಸಜನ್ ಎಂಬುವವರ ತೋಟಗಳಿಗೆ ಹಾನಿಯಾಗಿದೆ. ಕಾಫಿ, ತೆಂಗು ಮತ್ತು ಅಡಿಕೆ ಗಿಡಗಳನ್ನು ನಾಶಗೊಳಿಸಿವೆ ಎಂದು ತಿಳಿದು ಬಂದಿದೆ.
ಸುಂಟಿಕೊಪ್ಪದ ಅತ್ತೂರು ನಲ್ಲೂರು ಗ್ರಾಮದ ಕಡ್ಲೆಮನೆ ರಘುಕುಮಾರ ಎಂಬುವವರ ಮನೆಯ ಸಮೀಪದ ತೋಟಕ್ಕೆ ಆಹಾರ ಅರಸಿ ಬಂದ ಕಾಡಾನೆಗಳ ಹಿಂಡು ಕೃಷಿ ಫಸಲನ್ನು ತಿಂದು ಧ್ವಂಸಗೊಳಿಸಿದೆ. ತೋಟದಲ್ಲಿ ಬೆಳೆಯಲಾಗಿದ್ದ ಬಾಳೆಗಿಡಗಳನ್ನು ಸಂಪೂರ್ಣ ತಿಂದು ಹಾಕಿದೆ. ಅರಣ್ಯ ಇಲಾಖೆ ಎಷ್ಟೇ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳ ಹಿಂಡು ತೋಟಗಳಲ್ಲಿಯೇ ಆಶ್ರಯ ಪಡೆದುಕೊಳ್ಳುತ್ತಿವೆ. ಈ ಭಾಗದ ಬಹುತೇಕ ತೋಟಗಳಿಗೆ ದಾಳಿ ಮಾಡಿರುವ ಕಾಡಾನೆಗಳು ಬಾಳೆಯೊಂದಿಗೆ ಕಾಫಿ ಗಿಡಗಳನ್ನು ಕೂಡ ನಾಶಗೊಳಿಸಿವೆ ಎಂದು ಹೇಳಲಾಗಿದೆ.
ಕಾರ್ಯಾಚರಣೆ ನಡೆಸಿದ ದಿನ ಮರೆಯಾಗುವ ಕಾಡಾನೆಗಳು ಮತ್ತೆ ಮಾರನೇಯ ದಿನ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಹಾಡಹಗಲೇ ಮುಖ್ಯ ರಸ್ತೆಯಲ್ಲೂ ಆನೆಗಳು ಸಂಚರಿಸುತ್ತಿವೆ. ಸುಂಟಿಕೊಪ್ಪ, ಆನೆಕಾಡು, ಕುಶಾಲನಗರ ಹೆದ್ದಾರಿಯಲ್ಲಿ ನಿತ್ಯ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಆತಂಕದಲ್ಲೇ ತೆರಳಬೇಕಾಗಿದೆ.
ಒಂದೆಡೆ ಮಳೆಯ ವಾತಾವರಣ, ಮತ್ತೊಂದೆಡೆ ನಿರಂತರ ಕಾಡಾನೆಗಳ ದಾಳಿಯಿಂದಾಗಿ ಬೆಳೆಗಾರರು ಹಾಗೂ ಕಾರ್ಮಿಕರ ನಿತ್ಯ ಜೀವನದ ಮೇಲೆ ಪರಿಣಾಮ ಬೀರಿದೆ. ಸರಕಾರ ತುರ್ತಾಗಿ ಕಾಡಾನೆ ಉಪಟಳ ತಡೆಗೆ ಶಾಶ್ವತ ಯೋಜನೆ ಅನುಷ್ಠಾನಗೊಳಿಸದಿದ್ದಲ್ಲಿ ಕೃಷಿ ಕ್ಷೇತ್ರದ ಮೇಲೆ ದೊಡ್ಡ ಹೊಡೆತ ಬೀಳಬಹುದು ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಸಚಿವರು ಹಾಗೂ ಅರಣ್ಯ ಅಧಿಕಾರಿಗಳು ಕೇವಲ ಸಭೆಯನ್ನು ನಡೆಸಿ ಸುಮ್ಮನಾಗದೆ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಕಾರ್ಯೋನ್ಮುಖವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.