ಕೊಡಗು | ಮಳೆ ಕೊಂಚ ಶಾಂತವಾದರೂ ತಗ್ಗದ ಪ್ರವಾಹ : ಮುಂದುವರಿದ ಆತಂಕ
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳನ್ನು ಹೋಲಿಸಿದರೆ ಶುಕ್ರವಾರ ಮಳೆ ಕೊಂಚ ಶಾಂತವಾಗಿದೆ. ಆದರೆ ಪ್ರವಾಹ ಪರಿಸ್ಥಿತಿ ಹಾಗೇ ಮುಂದುವರೆದಿದ್ದು, ಆತಂಕದ ವಾತಾವರಣವಿದೆ. ಮನೆ, ರಸ್ತೆ, ಸೇತುವೆಗಳು ಜಲಾವೃತಗೊಂಡು ಹಾನಿಗೊಳಗಾಗಿದ್ದರೆ, ಭಾರೀ ಗಾಳಿಯಿಂದ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿವೆ. ಹಲವು ಕಡೆ ಬರೆ ಕುಸಿತದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಜು.20ರಂದು ಕೂಡ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನವರೆಗೆ ಜಿಲ್ಲಾವ್ಯಾಪಿ ಧಾರಾಕಾರ ಮಳೆ ಸುರಿದಿದ್ದು, ಬಹುತೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದವು. ಆದರೆ ಕ್ರಮೇಣ ಮಳೆ ಕ್ಷೀಣಗೊಳ್ಳುತ್ತಿದ್ದಂತೆ ಪ್ರವಾಹದ ಪರಿಸ್ಥಿತಿ ಕೂಡ ಶಾಂತವಾಗತೊಡಗಿತು.
ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 10 ಇಂಚಿಗೂ ಅಧಿಕ ಮಳೆಯಾಗಿದೆ. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳನ್ನು ಆವರಿಸಿದ್ದ ಪ್ರವಾಹದ ನೀರು ಹಗಲಿನ ವೇಳೆ ಮಳೆ ಕಡಿಮೆಯಾದ ಕಾರಣ ಇಳಿಮುಖಗೊಂಡಿತು.
ಭಾಗಮಂಡಲದಲ್ಲಿ 223 ಮಿ.ಮೀ, ಶಾಂತಳ್ಳಿ 183 ಮಿ.ಮೀ, ಅಮ್ಮತ್ತಿ 148.50, ಮಡಿಕೇರಿ 135.40, ನಾಪೊಕ್ಲು 150.20 ಮತ್ತು ಸಂಪಾಜೆಯಲ್ಲಿ 102.50 ಮಿ.ಮೀ ಮಳೆಯಾಗಿದ್ದು, ಇವುಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ದಾಖಲಾದ ಪ್ರದೇಶಗಳಾಗಿವೆ.
ಮಡಿಕೇರಿ ತಾಲ್ಲೂಕಿನಲ್ಲಿ ಗಾಳಿ, ಮಳೆಯ ಆತಂಕ ಮುಂದುವರೆದಿದೆ. ಉಳಿದಂತೆ ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.
ಭಾರೀ ಗಾಳಿ ಮಳೆಗೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಮಾಲಂಬಿ ಗ್ರಾಮದ ಯಮುನಾ ರಾಮ್ ಶೆಟ್ಟಿ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕುಶಾಲನಗರ ಹೋಬಳಿಯ ದೊಡ್ಡತ್ತೂರು ಗ್ರಾಮದ ಲಕ್ಷ್ಮಣ ಕಾಳಯ್ಯ ಅವರ ಮನೆಯ ಗೋಡೆಗೆ ಹಾನಿಯಾಗಿದ್ದು, ಕಂದಾಯ ಪರಿವೀಕ್ಷಕರು ಭೇಟಿ ನೀಡಿ ಪರಿಶೀಲಿಸಿದರು.
ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ನಲ್ಲೂರು ಗ್ರಾಮದ ಶಾರದಮ್ಮ ಹಾಗೂ ಬೆಟ್ಟಯ್ಯ ಎಂಬುವವರ ಮನೆಗೆ ಹಾನಿಯಾಗಿದೆ. ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ತಾತ್ಕಾಲಿಕವಾಗಿ ವಾಸಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿದರು. ಚೆಟ್ಟಳ್ಳಿ- ಮಡಿಕೇರಿ ರಸ್ತೆಯ ಅಭ್ಯಾಲದಲ್ಲಿ ಮರ ಸಹಿತ ಬರೆ ಕುಸಿದು ರಸ್ತೆ ಬಂದ್ ಆಗಿತ್ತು. ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸೇತುವೆ ಮುಳುಗಡೆ :ಮಡಿಕೇರಿ ತಾಲ್ಲೂಕಿನ ಕಡಂಗ, ಎಡಪಾಲ, ಬಾವಲಿ, ಚೆಯ್ಯಂಡಾಣೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ಮೇಲೆ ಹೊಳೆ ತುಂಬಿ ಹರಿಯುತ್ತಿದ್ದು, ಈ ಗ್ರಾಮಗಳಿಗೆ ಹೋಗುವ ಸಂಪರ್ಕ ಕಡಿತಗೊಂಡಿದೆ.
ಮಳೆ ವಿವರ :ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 105.71 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 29.68 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1348.51 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 637.16 ಮಿ.ಮೀ ಮಳೆಯಾಗಿತ್ತು.