ಕೊಡಗು | ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ : ವ್ಯಕ್ತಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
ಕೊಡಗು : ಕಾಡಾನೆಯೊಂದು ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ನಡೆದಿದೆ.
ಕಾಡಾನೆ ದಾಳಿಯಿಂದ ಗಾಯಗೊಂಡ ಪಾಲಿಬೆಟ್ಟದ ಕಾರ್ಮಿಕ ಮಂಜು(42) ಅವರನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಮಿಕ ಮಂಜು ಸ್ನೇಹಿತನೊಂದಿಗೆ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದೊಳಗಿದ್ದ ಕಾಡಾನೆಯೊಂದು ಹಿಂಬದಿಯಿಂದ ಏಕಾಏಕಿ ದಾಳಿ ಮಾಡಿ, ತನ್ನ ದಂತದಿಂದಲೂ ಚುಚ್ಚಿ ಗಾಯಗೊಳಿಸಿ ಮತ್ತೆ ಕಾಫಿ ತೋಟದೊಳಗೆ ನುಸುಳಿದೆ ಎಂದು ತಿಳಿದು ಬಂದಿದೆ.
ಜೊತೆಯಲಿದ್ದ ಮತ್ತೋರ್ವ ಕಾರ್ಮಿಕ ಕಾಡಾನೆ ದಾಳಿಯಿಂದ ಪಾರಾಗಿ ಇತರ ಕಾರ್ಮಿಕರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಕಾರ್ಮಿಕರು, ಗಂಭೀರ ಗಾಯಗೊಂಡ ಮಂಜು ಅವರನ್ನು ಪ್ರಥಮ ಚಿಕಿತ್ಸೆಗೆ ಅಮ್ಮತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸಿಎಫ್ ಗೋಪಾಲ್, ಆರ್ಎಫ್ಓ ಗಂಗಾಧರ್ ಗಾಯಾಳುವಿನ ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಡಾನೆ ದಾಳಿ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಿ ಆನೆಯನ್ನು ಕಾಡಿಗಟ್ಟಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.