ಕೊಡಗು ಜಿಲ್ಲೆಯ 21 ಸರಕಾರಿ ಶಾಲೆಗಳಿಗೆ ಬೀಗ
ಕಡಿಮೆ ದಾಖಲಾತಿ ಹೊಂದಿದ ಶಾಲೆಗಳಿಗೆ ಕಾದಿದೆಯೇ ಆಪತ್ತು?

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ 2019ರಿಂದ 2024ರವರೆಗೆ ಶೂನ್ಯ ದಾಖಲಾತಿ ಹೊಂದಿದ್ದ 21 ಸರಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಇದರಲ್ಲಿ 14ಹಿರಿಯ ಪ್ರಾಥಮಿಕ ಹಾಗೂ 7 ಕಿರಿಯ ಪ್ರಾಥಮಿಕ ಶಾಲೆಗಳು ಸೇರಿಕೊಂಡಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.
ಮಡಿಕೇರಿ ತಾಲೂಕಿನಲ್ಲಿ 6, ಸೋಮವಾರಪೇಟೆ 12 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 3 ಸರಕಾರಿ ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿಗಳು ದಾಖಲಾಗದೆ ಇರುವುದರಿಂದ ಶಾಲೆಯನ್ನು ಮುಚ್ಚಲಾಗಿದೆ. ಈಗಾಗಲೇ ಮುಚ್ಚಲ್ಪಟ್ಟಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ದಾಖಲಾದರೆ ಶಾಲೆಗಳನ್ನು ತೆರೆಯಲಾಗುವುದೆಂದು ಇಲಾಖೆ ಹೇಳುತ್ತಿದೆ. ಆದರೆ, ಒಂದು ಬಾರಿ ದಾಖಲಾತಿ ಇಲ್ಲದ ಸರಕಾರಿ ಶಾಲೆಗಳನ್ನು ಮುಚ್ಚಿದರೆ ಮತ್ತೆ ಆರಂಭಿಸುವುದು ಅನುಮಾನವಾಗಿದೆ.
ರಾಜ್ಯದಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರಕಾರಿ ಪ್ರಾಥಮಿಕ ಶಾಲೆಗಳನ್ನು ದಾಖಲಾತಿ ಹೊಂದಿರುವ ಸಮೀಪದ ಶಾಲೆಗಳಿಗೆ ವಿಲೀನ ಮಾಡುವ ಪ್ರಕ್ರಿಯೆಗೆ ರಾಜ್ಯ ಸರಕಾರ ರಾಜ್ಯದ ಎಂಟು ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ಮಾದರಿ ಶಾಲೆಗಳನ್ನು ಗುರುತಿಸಿ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ಮಾದರಿ ಶಾಲೆಗಳಿಗೆ ವಿಲೀನಗೊಳಿಸುವ ಯೋಜನೆಗೆ ಸರಕಾರ ಕೈ ಹಾಕಿದೆ.
ಒಂದು ವೇಳೆ ರಾಜ್ಯಾದ್ಯಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ವಿಲೀನ ಪ್ರಕ್ರಿಯೆ ಚಾಲನೆಗೊಂಡರೆ ಕೊಡಗಿನ 48 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ 16 ಹಿರಿಯ ಪ್ರಾಥಮಿಕ ಶಾಲೆಗಳು ಸೇರಿ ಒಟ್ಟು 64 ಶಾಲೆಗಳ ಬಾಗಿಲು ಶಾಶ್ವತವಾಗಿ ಮುಚ್ಚುವ ಆತಂಕ ಎದುರಾಗಿದೆ. ಅದರಲ್ಲಿ ಮಡಿಕೇರಿ ತಾಲೂಕಿನಲ್ಲಿ 23, ಸೋಮವಾರಪೇಟೆ 26 ಹಾಗೂ ವೀರಾಜಪೇಟೆ ತಾಲೂಕಿನ 15 ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ.
ಕೊಡಗಿನಲ್ಲಿ 90 ಏಕೋಪಧ್ಯಾಯ ಶಾಲೆಗಳು: ಜಿಲ್ಲೆಯಲ್ಲಿ ಒಂದೆಡೆ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಸಂಖ್ಯೆ ಪ್ರತೀ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಳವಾಗುತ್ತಿದೆ. ಅದಲ್ಲದೆ ಜಿಲ್ಲೆಯಲ್ಲಿ 89 ಸರಕಾರಿ ಪ್ರಾಥಮಿಕ ಮತ್ತು ಒಂದು ಪ್ರೌಢ ಶಾಲೆ ಏಕೋಪಧ್ಯಾಯ ಶಾಲೆಗಳ ಪಟ್ಟಿಯಲ್ಲಿ ಇದೆ. ಈ ಶಾಲೆಗಳಲ್ಲಿ ಎಲ್ಲ ತರಗತಿಗಳಿಗೆ ಒಬ್ಬರೇ ಶಿಕ್ಷಕರು ಪಾಠ ಮತ್ತು ಇನ್ನಿತರ ಕೆಲಸಗಳನ್ನು ಮಾಡಬೇಕು.
ಈಗಾಗಲೇ ಮುಚ್ಚಲ್ಪಟ್ಟಿರುವ ಸರಕಾರಿ ಶಾಲೆಗಳಲ್ಲಿದ್ದ ಶಿಕ್ಷಕರನ್ನೂ ಬೇರೆ ಶಾಲೆಗಳಿಗೆ ನೇಮಿಸಲಾಗಿದೆ. ಅದಲ್ಲದೆ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಸರಕಾರದ ಅವೈಜ್ಞಾನಿಕ ನಿಯಮಗಳಿಂದಲೂ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕೊಡಗು ಜಿಲ್ಲೆಯಲ್ಲಿ ಪ್ರತೀ ವರ್ಷ ಸರಕಾರಿ ಶಾಲೆಗಳಲ್ಲಿ ಎರಡು ಸಾವಿರ ದಾಖಲಾತಿ ಕಡಿಮೆಯಾಗುತ್ತಿದೆ. ಶೂನ್ಯ ದಾಖಲಾತಿಯಾಗಿರುವ ಕಾರಣದಿಂದ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದೆ. ವಿದ್ಯಾರ್ಥಿಗಳು ದಾಖಲಾದರೆ ಶಾಲೆಗಳನ್ನು ಪುನ: ತೆರೆಯಲಾಗುವುದು. ಅದಲ್ಲದೇ ಇತ್ತೀಚಿನ ವರ್ಷಗಳಲ್ಲಿ ವಸತಿ ಶಾಲೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ವಸತಿ ಶಾಲೆಗಳಿಗೆ ಸೇರಲು ಆಸಕ್ತಿ ಹೊಂದಿದ್ದಾರೆ.
-ರಂಗಧಾಮಪ್ಪಸಿ., ಡಿಡಿಪಿಐ ಕೊಡಗು ಜಿಲ್ಲೆ
ಹತ್ತಕ್ಕಿಂತ ಕಡಿಮೆ ದಾಖಲಾತಿ ಹೊಂದಿದ ಸರಕಾರಿ ಶಾಲೆಗಳ ತಾಲೂಕುವಾರು ಮಾಹಿತಿ :
ಕಿರಿಯ ಪ್ರಾಥಮಿಕ ಶಾಲೆಗಳು :
ಮಡಿಕೇರಿ: 18
ಸೋಮವಾರಪೇಟೆ:20
ವೀರಾಜಪೇಟೆ: 10
ಒಟ್ಟು: 48
ಹಿರಿಯ ಪ್ರಾಥಮಿಕ ಶಾಲೆ :
ಮಡಿಕೇರಿ: 5
ಸೋಮವಾರಪೇಟೆ: 6
ವೀರಾಜಪೇಟೆ: 5
ಒಟ್ಟು: 16