ಮಡಿಕೇರಿ: ಟ್ರಕ್ಕಿಂಗ್ ಗೆ ತೆರಳಿದ್ದ ಯುವಕ ಹೃದಯಘಾತದಿಂದ ಮೃತ್ಯು
ಮಡಿಕೇರಿ: ತಡಿಯಂಡಮೋಳ್ ಬೆಟ್ಟವನ್ನೇರಿದ್ದ ಪ್ರವಾಸಿ ಯುವಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಮಡಿಕೇರಿಯ ಕಕ್ಕಬೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹರಿಯಾಣದ ಜತಿನ್ ಕುಮಾರ್ (23) ಮೃತ ಯುವಕ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ 6 ಜನರ ಚಾರಣಿಗರ ತಂಡ ಬೆಟ್ಟವನ್ನು ಏರಲು ಕಕ್ಕಬ್ಬೆ ಗೆ ಆಗಮಿಸಿತ್ತು. ಮೂವರು ಯುವಕರು ಮತ್ತು ಮೂವರು ಯುವತಿಯರ ತಂಡ ತಡಿಯಂಡಮೋಳ್ ಶಿಖರದ ತುದಿ ತಲುಪುತ್ತಿದ್ದಂತೆ ಉಸಿರಾಟದ ಸಮಸ್ಯೆಯಿಂದಾಗಿ ಜತಿನ್ ಕುಸಿದು ಬಿದ್ದಿದ್ದು ತಂಡದಲ್ಲಿದ್ದ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದೆ ಸಾವನಪ್ಪಿದ್ದಾರೆ ಎನ್ನಲಾಗಿದೆ.
ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಡಿಯಂಡಮೋಳ್ ಶಿಖರದ ತುದಿಯಿಂದ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿ, ಗ್ರಾ.ಪಂ ಸದಸ್ಯ ಕುಡಿಯರ ಭರತ್, ಉಪ ವಲಯ ಅರಣ್ಯ ಅಧಿಕಾರಿ ಎಂ.ಬಿ.ಸುರೇಶ್, ಗಸ್ತು ಅರಣ್ಯ ಪಾಲಕ ಸೋಮಣ್ಣ ಗೌಡ ಕಠಿಣ ದಾರಿಯಲ್ಲಿ ಮೃತದೇಹವನ್ನು ಹೊತ್ತು ಕೆಳಕ್ಕೆ ತಂದಿದ್ದಾರೆ.
ಮೃತ ದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಪೋಷಕರು ಆಗಮಿಸಿದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.